ಇಸ್ಲಾಮಾಬಾದ್: ಕಳೆದ 25 ವರ್ಷಗಳಿಂದ ಕಾರ್ಗಿಲ್ ಯುದ್ಧಕ್ಕೂ ತನ್ನ ಸೇನೆಗೂ ಸಂಬಂಧವೇ ಇಲ್ಲ ವೆನ್ನುತ್ತಿದ್ದ ಪಾಕಿಸ್ಥಾನದ ಸುಳ್ಳಿನ ಮುಖವಾಡ ಕಡೆಗೂ ಕಳಚಿ ಬಿದ್ದಿದೆ. ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆಯು ನೇರ ಪಾತ್ರ ವಹಿಸಿತ್ತು ಎಂದು ಪಾಕ್ ಸೇನಾ ಮುಖ್ಯಸ್ಥ ಜ| ಅಸ್ಸೀಂ ಮುನೀರ್ ಈಗ ಬಹಿರಂಗ ವಾಗಿ ಒಪ್ಪಿಕೊಂಡಿದ್ದಾರೆ!
ಪಾಕ್ ಸೇನಾ ದಿನದ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದ ಜ| ಮುನೀರ್, ಕಾರ್ಗಿಲ್ ಯುದ್ಧದಲ್ಲಿ ಉಗ್ರರ ಹೆಸರಿನಲ್ಲಿ ಪಾಕ್ ಸೇನೆ ನಡೆಸಿದ್ದ ದುಷ್ಕೃತ್ಯವನ್ನು ಬಾಯಿಬಿಟ್ಟಿದ್ದಾರೆ. “ಪಾಕ್ ಶಕ್ತಿಯುತ ರಾಷ್ಟ್ರವಾಗಿದ್ದು, ಸ್ವಾತಂತ್ರ್ಯದ ಮೌಲ್ಯವನ್ನು ಹಾಗೂ ಅದನ್ನು ಉಳಿಸಿಕೊಳ್ಳುವ ಪರಿಯನ್ನು ಅರ್ಥೈಸಿಕೊಂಡಿದೆ.
ರಾಷ್ಟ್ರದ ಭದ್ರತೆ ನಮ್ಮ ಆದ್ಯತೆ. ಹೀಗಾಗಿಯೇ ದೇಶ ಕ್ಕಾಗಿ ಮತ್ತು ಇಸ್ಲಾಂಗಾಗಿ 1948, 1965 ,1971 ಹಾಗೂ ಕಾರ್ಗಿಲ್ ಯುದ್ಧಗಳಲ್ಲಿ ಪಾಕಿಸ್ಥಾನಿ ಸೈನಿಕರು ಪ್ರಾಣ ತೆತ್ತಿದ್ದಾರೆ’ ಎಂದಿದ್ದಾರೆ.
ಈ ಮೂಲಕ ಕಾರ್ಗಿಲ್ ಕಬಳಿಸಲು ಪಾಕ್ ಸೇನೆ ರೂಪಿಸಿದ ಸಂಚು ಜಗತ್ತಿನ ಮುಂದೆ ಬಹಿರಂಗಗೊಂಡಿದೆ. ಇತ್ತೀಚೆಗಷ್ಟೇ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡ ಕಾರ್ಗಿಲ್ ವಿಚಾರದಲ್ಲಿ ನಾವು ತಪ್ಪು ಮಾಡಿದೆವು ಎಂದು ಒಪ್ಪಿಕೊಂಡಿದ್ದರು. ಆ ಬೆನ್ನಲ್ಲೇ ಜ| ಮುನೀರ್ ಹೇಳಿಕೆ ಮತ್ತೂಮ್ಮೆ ಪಾಕ್‌ನ ನಿಜಬಣ್ಣ ಬಯಲು ಮಾಡಿದೆ.
ಕಾಶ್ಮೀರಿ ಉಗ್ರರು ಎಂದಿದ್ದ ಪಾಕ್
ಕಾರ್ಗಿಲ್ ಸಂಘರ್ಷದಲ್ಲಿ ಪಾಕಿಸ್ಥಾನದ 400ರಿಂದ 4 ಸಾವಿರದಷ್ಟು ಸೈನಿಕರು ಮೃತ ಪಟ್ಟಿದ್ದರು ಎನ್ನಲಾಗುತ್ತದೆ. ಆದರೆ ಪಾಕ್ ಇದನ್ನು ನಿರಾಕರಿಸಿತ್ತು. ಕಾರ್ಗಿಲ್ ಏರಿ ಕುಳಿ ತವರು ನಮ್ಮ ಯೋಧರಲ್ಲ, ಕಾಶ್ಮೀರದ ಸ್ವಾತಂತ್ರ್ಯ ಬಯ ಸಿರುವ ಮುಜಾಹಿದೀನ್ ಉಗ್ರರು. ನಮ್ಮ ಸೇನೆಗೂ ಅವರಿಗೂ ಸಂಬಂಧವೇ ಇಲ್ಲ ಎಂದು 25 ವರ್ಷದಿಂದ ಸುಳ್ಳು ಹೇಳುತ್ತಿತ್ತು.