ಇಸ್ಲಾಮಾಬಾದ್: ಕೋವಿಡ್ ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತಕ್ಕೆ ನೆರವು ನೀಡಲು ಪಾಕಿಸ್ತಾನದ ಎಧಿ ಫೌಂಡೇಶನ್ ಮುಂದಾಗಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು 50 ಆ್ಯಂಬುಲೆನ್ಸ್ ಹಾಗೂ ಸಹಾಯಕ ಸಿಬಂದಿಯನ್ನು ಕಳುಹಿಸುವುದಾಗಿ ತಿಳಿಸಿದೆ.
ಪ್ರಧಾನಿ ಮೋದಿಗೆ ಎಧಿ ಫೌಂಡೇಶನ್ ನ ಮುಖ್ಯಸ್ಥ ಫೈಸಲ್ ಎಧಿ ಪತ್ರ ಬರೆದಿದ್ದು, ಭಾರತದಲ್ಲಿನ ಕೋವಿಡ್ 19 ಪರಿಸ್ಥಿತಿಯನ್ನು ತಮ್ಮ ಫೌಂಡೇಶನ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್ ಭಾರೀ ಪ್ರಮಾಣದ ಹೊಡೆತವನ್ನು ನೀಡುತ್ತಿದ್ದು, ಇದರಿಂದಾಗಿ ಲಕ್ಷಾಂತರ ಮಂದಿ ತೊಂದರೆ ಅನುಭವಿಸುವಂತಾಗಿದೆ ಎಂಬುದು ಕಳವಳಕಾರಿ ವಿಷಯವಾಗಿದೆ ಎಂದು ಫೈಸಲ್ ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತಕ್ಕೆ 50 ಆ್ಯಂಬುಲೆನ್ಸ್ ಹಾಗೂ ಸಹಾಯಕ ಸಿಬಂದಿಯನ್ನು ಕಳುಹಿಸುವುದಾಗಿ ವೈಯಕ್ತಿಕವಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅಗತ್ಯವಿದ್ದರೆ ಆ್ಯಂಬುಲೆನ್ಸ್ ಸಿಬಂದಿಗಳಿಗೆ ಆಹಾರ, ಇಂಧನ ವ್ಯವಸ್ಥೆ ಸೇರಿದಂತೆ ಇತರ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸಿದ್ಧ ಎಂದು ಎಧಿ ಫೌಂಡೇಶನ್ ತಿಳಿಸಿದೆ.
ಎಧಿ ಫೌಂಡೇಶನ್ ನ ಆ್ಯಂಬುಲೆನ್ಸ್ ಸೇವೆ ಪಾಕಿಸ್ತಾನದ ಸರ್ಕಾರಿ ಸೇವೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇವುಗಳು ಸರ್ಕಾರಿ ಆ್ಯಂಬುಲೆನ್ಸ್ ಗಿಂತ ಮೊದಲು ಅಪಘಾತ ಅಥವಾ ಭಯೋತ್ಪಾದಕ ದಾಳಿ ನಡೆದ ಸ್ಥಳವನ್ನು ತಲುಪುತ್ತದೆ.