ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನದ ಪೌರತ್ವ ಹೊಂದಿರುವ ಮಹಿಳೆಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಬನಾ ನಸೀರಾ ( 50) ಬಂಧಿತೆ. ಆರೋಪಿ ವಿರುದ್ಧ ವಿದೇಶಿ ನಿಯಮಗಳ ಉಲ್ಲಂಘನೆ ಹಾಗೂ ನಕಲಿ ದಾಖಲೆಗಳನ್ನು ಹೊಂದಿದ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ.
ಮೂಲತಃ ಭಾರತೀಯಳೇ ಆದ ಶಬನಾ ಈ ಹಿಂದೆ ಪಾಕಿಸ್ತಾನದ ನೂರ್ ಮೊಹಮದ್ ಎಂಬಾತನನ್ನು 1987ರಲ್ಲಿ ವಿವಾಹವಾಗಿದ್ದರು. ಬಳಿಕ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದುಕೊಂಡಿದ್ದಾರೆ. 2010ರಲ್ಲಿ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದ ಆಕೆ, ಪ್ರಯಾಣಿಕರ ವೀಸಾ ಪಡೆದು ಭಾರತಕ್ಕೆ ವಾಪಾಸ್ ಆಗಿದ್ದರು.
ಈ ವೀಸಾ ಅವಧಿ ಮುಗಿದಿದ್ದು ಅವಧಿ ವಿಸ್ತರಿಸುವಂತೆ ಕೋರಿ ಪಾಸ್ ಪೋರ್ಟ್ ಅಧಿಕಾರಿಗಳಿಗೆ ನೀಡಿರುವ ಮನವಿ ಪತ್ರ ಇನ್ನೂ ಇತ್ಯರ್ಥಗೊಂಡಿಲ್ಲ. ಜತೆಗೆ, ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಸಿದ್ದಾಪುರಲ್ಲಿ ಶಬನಾ ಅಕ್ರಮವಾಗಿ ವಾಸವಿರುವ ಮಾಹಿತಿ ಆಧರಿಸಿ ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪಾಕಿಸ್ತಾನದ ಪೌರತ್ವ ದಾಖಲೆಗಳು ದೊರೆತಿವೆ. ಜತೆಗೆ, ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಪಾನ್ ಕಾರ್ಡ್ ಕೂಡ ಸ್ಥಳೀಯ ವಿಳಾಸದಲ್ಲಿ ಮಾಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.
2017ರಲ್ಲಿ ಮೂವರ ಬಂಧನವಾಗಿತ್ತು: 2017ರ ಮೇ ತಿಂಗಳಿನಲ್ಲಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮವಾಗಿ ವಾಸವಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪೈಕಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಾಕ್ ದಂಪತಿ ಖಾಸಿಪ್ ಶಂಶುದ್ದೀನ್ ಹಾಗೂ ಕಿರ್ಹೋನ ಗುಲಾಂ ಅಲಿಯನ್ನು ಇದೇ ಮೇ ತಿಂಗಳಲ್ಲಿ ಪಾಕ್‌ಗೆ ಗಡಿಪಾರು ಮಾಡಲಾಗಿದೆ. ಮತ್ತೂಂದೆಡೆ ಕೇರಳ ಮೂಲದ ಮೊಹಮದ್ ಶಿಹಾಬ್‌ರನ್ನು ಪ್ರೇಮವಿವಾಹ ಮಾಡಿಕೊಂಡು ಭಾರತಕ್ಕೆ ಬಂದಿದ್ದ ಸಮೀರಾ ಒಂದು ಮಗುವಿಗೆ ಜನ್ಮ ನೀಡಿದ್ದು ಸದ್ಯ ಜೈಲಿನಲ್ಲಿಯೇ ಇದ್ದಾರೆ.