Advertisement
ಮಾರ್ಚ್ ತಿಂಗಳಲ್ಲಿ ಚಿಕ್ಕೋಡಿಯಲ್ಲಿ ಮತ್ತು ಆಗಸ್ಟ್ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಪತ್ತೆಯಾದ ಎರಡು ಪ್ರತ್ಯೇಕ ಖೋಟಾ ನೋಟು ಜಾಲ ಪ್ರಕರಣಗಳ ಆರೋಪಿಗಳನ್ನು ರಾಷ್ಟ್ರೀಯ ತನಿಖಾದಳ (ಎನ್‌ಐಎ) ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತನಿಖೆಯಲ್ಲಿ ಪಾಕಿಸ್ತಾನದಿಂದ ಖೋಟಾನೋಟುಗಳು ಬೆಂಗಳೂರಿಗೆ ಸರಬರಾಜಾಗುತ್ತಿರುವುದು ಪತ್ತೆಯಾಗಿದೆ. ಬಾಂಗ್ಲಾ ಮಾತ್ರವಲ್ಲದೆ ಗುಜರಾತ್, ಕೇರಳ, ಮಂಗಳೂರು ಮೂಲಕವೂ ಖೋಟಾನೋಟುಗಳ ಚಲಾವಣೆ ನಡೆಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
Related Articles
ಪಾಕ್‌ನಲ್ಲಿ ಮುದ್ರಿತಗೊಂಡ ಖೋಟಾನೋಟುಗಳು ನೇಪಾಳದ ಮಾರ್ಗದಲ್ಲಿ ಬಾಂಗ್ಲಾ ತಲುಪುತ್ತವೆ. ಬಳಿಕ ಅಲ್ಲಿಂದ ನೇರವಾಗಿ ಗಡಿಯ ಮೂಲಕ ಪಶ್ಚಿಮ ಬಂಗಾಳಕ್ಕೆ ಸರಬರಾಜಾಗುತ್ತವೆ. ಕೊಲ್ಕತ್ತಾ, ಮಾಲ್ಡಾ ಜಿಲ್ಲೆಯ ಏಜೆಂಟರ ಮುಖೇನ ಮಹಾರಾಷ್ಟ್ರದಿಂದ ಬೆಂಗಳೂರು ಸೇರಿ ರಾಜ್ಯಕ್ಕೆ ಬರುತ್ತವೆ.
Advertisement
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಪ್ರಮುಖ ನ ಗರಗಳಲ್ಲಿ ರಾಜ್ಯಕ್ಕೆ ಬರುವ ಭಾರೀ ಪ್ರಮಾಣದ ಖೋಟಾನೋಟುಗಳನ್ನು ಚಲಾವಣೆ ಮಾಡಲು ತಂಡಗಳು ಹುಟ್ಟಿಕೊಂಡಿವೆ. ಪ್ರತಿ ತಂಡಕ್ಕೆ ಪಶ್ಚಿಮ ಬಂಗಾಳ ಮೂಲದ ಓರ್ವ ವ್ಯಕ್ತಿ ಉಸ್ತುವಾರಿ ಮಾಡುತ್ತಾನೆ. ಆತನ ಸೂಚನೆ ಮೇರೆಗೆ ಸ್ಥಳೀಯ ಕೆಲವರು ಕಮಿಷನ್ ಆಸೆಗೆ ಈ ಜಾಲದಲ್ಲಿ ಸಕ್ರಿಯರಾಗಿದ್ದಾರೆ.
ಉಗ್ರ ಸಂಘಟನೆಗಳು ಸೇರಿ ಹಲವು ವಿಧ್ವಂಸಕ ಸಂಸ್ಥೆಗಳು ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಕಣ್ಣಿಟ್ಟಿದ್ದು ಮೊದಲಿನಿಂದಲೂ ಖೋಟಾನೋಟುಗಳನ್ನು ದೇಶಕ್ಕೆ ಸರಬರಾಜು ಮಾಡುತ್ತಿದ್ದು,ನೋಟು ಅಮಾನ್ಯಿàಕರಣ ಬಳಿಕವೂ ಈ ಸರಬರಾಜು ಮುಂದುವರಿಸಿದೆ ಎಂದು ತಿಳಿದುಬಂದಿದೆ.
ಎಟಿಎಂ ಹಣ ವರ್ಗಾವಣೆ ಸಾಕ್ಷ್ಯ!ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇದುವರೆಗೂ ಮಹಿಳೆ ಸೇರಿ ಏಳು ಮಂದಿ ಆರೋಪಿಗಳನ್ನು ಎನ್‌ಐಎ ಬಂಧಿಸಿದೆ. ಆರೋಪಿಗಳ ಬಂಧನದ ವೇಳೆ ಡೈರಿ ಹಾಗೂ ಪಶ್ಚಿಮ ಬಂಗಾಳದಲ್ಲಿರುವ ದಂಧೆಯ ಕಿಂಗ್‌ಪಿನ್‌ಗಳಿಗೆ ಎಟಿಎಂ ಮೂಲಕ ಹಣ ವರ್ಗಾವಣೆ ಮಾಡಿರುವ ರಸೀದಿಗಳು ಲಭ್ಯವಾಗಿವೆ. ಅವುಗಳ ಪರಿಶೀಲನೆ ವೇಳೆ ಆರೋಪಿಗಳು ನಿರಂತರವಾಗಿ ಈ ಜಾಲದಲ್ಲಿ ಸಕ್ರಿಯರಾಗಿದ್ದರು ಎಂದು ಗೊತ್ತಾಗಿದೆ. ಕಳೆದ ತಿಂಗಳು ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಮೂಲದ ಮೊಹಮದ್ ಸಾಜೀದ್ ಅಲಿ, ಬಾಗಲಕೋಟೆಯ ಗಂಗಾಧರ, ಎಂ.ಜೆ ರಾಜು ಪೊಲೀಸರಿಗೆ ಸಿಕ್ಕಿಹಾಕಿಕೊಲುÛವ ಉದ್ದೇಶದಿಂದ ಆಗಾಗ್ಗೆ ತಾವಿದ್ದ ಸ್ಥಳಗಳನ್ನು ಬದಲಾಯಿಸುತ್ತಿದ್ದರು. ರಾಜ್ಯದ ಜಾಲಕ್ಕೆ ಗಂಗಾಧರ ಕೋಲ್ಕರ ಹಾಗೂ ರಾಜೇಂದ್ರ ಕುಂಬಾರ್ ಪ್ರಮುಖ ಕಿಂಗ್‌ಪಿನ್‌ಗಳು ಆಗಿರಬಹುದು ಎಂದು ಎನ್‌ಐಎ ಅಧಿಕಾರಿಗಳು ಶಂಕಿಸಿದ್ದಾರೆ. ಪ.ಬಂಗಾಳ ಮಾಲ್ಡಾ ಜಿಲ್ಲೆಯೇ ಸರಬರಾಜು ಕೇಂದ್ರ ಸ್ಥಾನ
ಮತ್ತೂಂದೆಡೆ ಬಾಂಗ್ಲಾ ಗಡಿಯ ಮೂಲಕ ಪಶ್ಚಿಮ ಬಂಗಾಳದ ಕೊಲ್ಕತ್ತಾ, ಮಾಲ್ಡಾ ಜಿಲ್ಲೆಗೆ ಹರಿದು ಬರುವ ಕೋಟ್ಯಾಂತರ ರೂ. ಖೋಟಾನೋಟುಗಳನ್ನು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಸೇರಿ ಇತರೆ ರಾಜ್ಯಗಳಿಗೆ ಅಲ್ಲಿಂದಲೇ ರವಾನೆಯಾಗುತ್ತಿವೆ. ರಾಜ್ಯದ ಜಾಲಕ್ಕೆ ಕೊಲ್ಕತ್ತಾದ ಶಹನೋಯಾಜ್ ಕಸೂರಿ ಸೂತ್ರಧಾರ , ಆತ ಜೈಲು ಸೇರಿದ ಬಳಿಕ ನೈಫುಲ್ಲಾ ಇಸ್ಲಾಂ , ಇನ್ನಿತರೆ ಆರೋಪಿಗಳು ಸರಬರಾಜು ದಂಧೆ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದುವರೆಗೂ ಬಂಧಿತರಾಗಿರುವ ಆರೋಪಿಗಳು!
ಮಾರ್ಚ್ 12ರ ಚಿಕ್ಕೋಡಿ ಪ್ರಕರಣದಲ್ಲಿ ದಲೀಮ್ ಮಿಯಾ, ರಾಜೇಂದ್ರ ಕುಂಬಾರ್, ರಾಜೇಂದ್ರ ಪಾಟೀಲ್ ಬಂಧನವಾಗಿದ್ದು ಅವರಿಂದ ಎರಡು ಸಾವಿರ ರೂ. ಮುಖಬೆಲೆಯ 82 ಸಾವಿರ ರೂ. ಜಪ್ತಿಯಾಗಿದೆ. ಆಗಸ್ಟ್ 7ರಂದು ಮಾದನಾಯಕನಹಳ್ಳಿಯ ಆಲೂರು ಸಮೀಪ ಗಂಗಾಧರ ಕೋಲ್ಕರ, ಮೊಹಮದ್ ಸಾಜೀದ್ ಅಲಿ ಹಾಗೂ ಎಂ.ಜಿ ರಾಜು ಎಂಬಾತನ್ನು ಬಂಧಿಸಿ ಎರಡು ಸಾವಿರ ರೂ. ಮುಖಬೆಲೆಯ 4.34ಲಕ್ಷ ರೂ ವಶಪಡಿಸಿಕೊಂಡಿದ್ದರು, ಅದೇ ದಿನ ಶ್ರೀರಾಂಪುರದಲ್ಲಿ ವನಿತಾ ಅಲಿಯಾಸ್ ತಂಗಂ ಎಂಬಾಕೆಯನ್ನು ಬಂಧಿಸಿ 2.50 ಲಕ್ಷ ರೂ. ನಕಲಿ ನೋಟು ವಶಪಡಿಸಿಕೊಂಡಿದ್ದರು. – ಮಂಜುನಾಥ್ ಲಘುಮೇನಹಳ್ಳಿ