ಹೊಸದಿಲ್ಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಪಡೆ ಪಾಕ್‌ನ ಬಾಲಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮರಗಳು ಧರೆಗುರುಳಿದ್ದು ಬಿಟ್ಟರೆ, ಬೇರಾವ ಹಾನಿಯೂ ಆಗಿಲ್ಲ ಎಂದು ಹೇಳುತ್ತಿರುವ ಪಾಕಿಸ್ಥಾನದ ನಿಜ ಬಣ್ಣ ಮತ್ತೂಮ್ಮೆ ಬಯಲಾಗಿದೆ. ಬಾಲಕೋಟ್‌ನ ದಾಳಿಯಲ್ಲಿ ಕೇವಲ ಉಗ್ರರಷ್ಟೇ ಅಲ್ಲ, ಪಾಕಿಸ್ಥಾನದ ನಾಲ್ವರು ಸೈನಿಕರೂ ಮೃತಪಟ್ಟಿದ್ದಾರೆ ಎಂಬ ಅಂಶ ಈಗ ಬಹಿರಂಗವಾಗಿದೆ.
ಸ್ಥಳೀಯ ಮಸೀದಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಈ ಮಾಹಿತಿ ನೀಡಿದ್ದು, ಉಗ್ರರಲ್ಲದೆ, ಸೈನಿಕರೂ ಸತ್ತಿದ್ದರು ಎಂಬ ವಿಚಾರ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಫೆ. 26ರ ದಾಳಿಯಲ್ಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿ.ಕೆ.ಗೋಖಲೆ ತಿಳಿಸಿದ್ದರು. ಆದರೆ, ಪಾಕಿಸ್ಥಾನವು ಅದನ್ನು ಅಲ್ಲಗಳೆದಿತ್ತು. ಇದಾದ ಬಳಿಕ ಇಂಡಿಯಾ ಟುಡೇ ಟಿವಿಯ ವಿಶೇಷ ತನಿಖಾ ವರದಿಯ ತಂಡವು, ಪಾಕ್ ಆಕ್ರಮಿತ ಕಾಶ್ಮೀರದ ಪೊಲೀಸರು, ಬಾಲಕೋಟ್ ಗ್ರಾಮಸ್ಥರು ಹಾಗೂ ಜೈಶ್‌ನ ಕಮಾಂಡರ್‌ಗಳನ್ನು ಸಂಪರ್ಕಿಸಿದಾಗ ಅಲ್ಲಿನ ಸಾವು- ನೋವಿನ ಮಾಹಿತಿ ಹೊರಬಿದ್ದಿದೆ.
ದೇಣಿಗೆ ಸಂಗ್ರಹ: ಇದೇ ವೇಳೆ, ಜೈಶ್ ಸಂಘಟನೆಗೆ ನಿಷೇಧ ಹೇರಲಾಗಿದೆ, ಎಲ್ಲ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂಬ ಪಾಕಿಸ್ಥಾನದ ಸುಳ್ಳಿನ ಸರಮಾಲೆ ಕೂಡ ಬಯಲಾಗಿದೆ. ಜೈಶ್ ಉಗ್ರ ಸಂಘಟನೆಯು ಈಗಲೂ ದೇಣಿಗೆ ಸಂಗ್ರಹ ಕಾರ್ಯವನ್ನು ಮುಂದುವರಿಸಿದ್ದು, ನಿರಾತಂಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ವಿಚಾರವನ್ನೂ ತನಿಖಾ ತಂಡ ಕಂಡುಕೊಂಡಿದೆ. ವಿದೇಶಿ ದೇಣಿಗೆದಾರನ ರೂಪದಲ್ಲಿ ಟಿವಿ ವರದಿಗಾರರು ಕರೆ ಮಾಡಿದಾಗ, ಜೈಶ್ ಉಗ್ರರು ತಮ್ಮ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನೂ ನೀಡಿ ಹಣ ಹಾಕುವಂತೆ ಸೂಚಿಸಿದ್ದಾರೆ ಎಂದೂ ವರದಿ ಹೇಳಿದೆ. ಇದೇ ವೇಳೆ, ಎಫ್16 ಯುದ್ಧ ವಿಮಾನ ಪತನಗೊಂಡ ಹಾಗೂ ಅವಶೇಷಗಳು ಬಿದ್ದಿರುವಂಥ ಪ್ರದೇಶಕ್ಕೆ ಹೋಗಲು ಯಾರಿಗೂ ಅನುಮತಿ ನೀಡದಂತೆ ವಿಶೇಷ ಅಧಿಕಾರಿಗಳನ್ನು ಪಿಒಕೆ ಪೊಲೀಸರು ನೇಮಿಸಿದ್ದಾರೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಪಾಕ್ ಸರಕಾರ ಮಾತ್ರ ಎಫ್16 ವಿಮಾನ ಪತನಗೊಂಡಿಲ್ಲ ಎಂದು ವಾದಿಸುತ್ತಲೇ ಬಂದಿದೆ.
ಗ್ರೆನೇಡ್, ಡಿಟೋನೇಟರ್ ಹೊಂದಿದ್ದ ಯುವಕನ ಸೆರೆ: ಜಮ್ಮು-ಕಾಶ್ಮೀರದ ಪೂಂಛ… ಜಿಲ್ಲೆಯಲ್ಲಿರುವ ಸೇನಾ ನೆಲೆಯ ಮುಂದೆ ಎರಡು ಗ್ರೆನೇಡ್‌ಗಳು ಹಾಗೂ ಒಂದು ಡಿಟೋನೇಟರ್ ಅನ್ನು ಹಿಡಿದುಕೊಂಡು ನಿಂತಿದ್ದ 33 ವರ್ಷದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತನನ್ನು ಕಾಲಕೋಟೆ ಪ್ರದೇಶದ ರಾಜೀಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಸೇನೆಯ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲೆಂದು ಆಗಮಿಸಿದ್ದ. ತಪಾಸಣೆ ವೇಳೆ ಈತನ ಬಳಿ 2 ಗ್ರೆನೇಡ್ ಮತ್ತು ಒಂದು ಡಿಟೋನೇಟರ್ ಇರುವುದು ಪತ್ತೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಮತ್ತೂಂದು ದಾಳಿಗೆ ಸಂಚು
44 ಯೋಧರನ್ನು ಬಲಿಪಡೆದು ಜೈಶ್ ರಾಕ್ಷಸರು ಪುಲ್ವಾಮಾ ಮಾದರಿ ಮತ್ತೂಂದು ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ಭದ್ರತಾ ಪಡೆಗಳಿಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಕಣಿವೆ ರಾಜ್ಯದಲ್ಲಿ ಇನ್ನೊಂದು ಆತ್ಮಾಹುತಿ ದಾಳಿ ನಡೆಸಲು ಜೈಶ್ ಸಂಘಟನೆಯು 5ರಿಂದ 6 ಉಗ್ರರಿಗೆ ತರಬೇತಿ ನೀಡುತ್ತಿದೆ. ಅಲ್ಲದೆ, ಸ್ಫೋಟಕಗಳನ್ನು ತಯಾರಿಸಲು ಜಮ್ಮು-ಕಾಶ್ಮೀರದ ಯುವಕರನ್ನೇ ನೇಮಕ ಮಾಡಲಾಗಿದೆ ಎಂದೂ ಗುಪ್ತಚರ ಸಂಸ್ಥೆಗಳು ಹೇಳಿವೆ. ಹಸಿರು ಬಣ್ಣದ ಸ್ಕಾರ್ಪಿಯೋ ಕಾರನ್ನು ದಾಳಿಗೆ ಬಳಸುವ ಸಾಧ್ಯತೆ ಬಗ್ಗೆಯೂ ಎಚ್ಚರಿಸಿದೆ. ಜೈಶ್‌ಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮದ ಗ್ರೂಪ್‌ವೊಂದರ ಸಂದೇಶವನ್ನು ಡಿಕೋಡ್ ಮಾಡುವ ಮೂಲಕ ಈ ಅಂಶಗಳನ್ನು ಕಂಡುಕೊಳ್ಳಲಾಗಿದೆ. “ಪುಲ್ವಾಮಾ ದಾಳಿಯಲ್ಲಿ ಬಳಸಲಾದ ಸ್ಫೋಟಕಗಳು ಕೇವಲ 200 ಕೆಜಿಯದ್ದಾಗಿದ್ದವು. ಈಗ 500 ಕೆ.ಜಿ.ಯ ಸ್ಫೋಟಕ್ಕೆ ಸಿದ್ಧರಾಗಿ. ಭದ್ರತಾ ಪಡೆಗಳು ಮೊದಲು ಕಾಶ್ಮೀರಿಗರನ್ನು ಟಾರ್ಗೆಟ್ ಮಾಡುವುದನ್ನು ನಿಲ್ಲಿಸಲಿ. ಈ ಯುದ್ಧ ನಮ್ಮ ಮತ್ತು ನಿಮ್ಮ ನಡುವೆ ನಡೆಯುತ್ತಿರುವಂಥದ್ದು. ಬಂದು ನಮ್ಮೆದುರು ಹೋರಾಡಿ. ನಾವು ರೆಡಿಯಾಗಿದ್ದೇವೆ. ಇದು ಕೇವಲ ಆರಂಭ ಮಾತ್ರ’ ಎಂದು ಆ ಸಂದೇಶದಲ್ಲಿ ಹೇಳಲಾಗಿದೆ.