Advertisement

ಪಾಕ್ ಹಿಂದೂಯುವತಿ ನಿಮ್ರಿತಾ ಕುಮಾರಿ ಅತ್ಯಾಚಾರಕ್ಕೆ ಬಲಿ? ಪೋಸ್ಟ್ ಮಾರ್ಟಂ ವರದಿಯಲ್ಲೇನಿದೆ?

10:00 AM Nov 08, 2019 | Hari Prasad |

ಲಾಹೋರ್: ಪಾಕಿಸ್ಥಾನದ ಲರ್ಕಾನದ ಬೆನ್ ಝೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ನಿಮ್ರಿತಾ ಕುಮಾರಿ ಪ್ರಕರಣಕ್ಕೆ ಮಹತ್ವದ ತಿರುವು ಲಭ್ಯವಾಗಿದ್ದು ನಿಮ್ರಿತಾ ಸಾವಿಗೀಡಾಗುವುದಕ್ಕೂ ಮೊದಲು ಅತ್ಯಾಚಾರಕ್ಕೆ ಒಳಗಾಗಿದ್ದಳು ಎಂದು ಅಂತಿಮ ವಿಸ್ತೃತ ಪೋಸ್ಟ್ ಮಾರ್ಟಂ ವರದಿಯಲ್ಲಿ ಬಹಿರಂಗಗೊಂಡಿದೆ.

Advertisement

ಈಕೆಯ ಮೃತದೇಹದ ಅಂತಿಮ ವಿಸ್ತೃತ ಪೋಸ್ಟ್ ಮಾರ್ಟಂ ವರದಿಯನ್ನು ಲರ್ಕಾನದಲ್ಲಿರುವ ಛಂಡ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಬುಧವಾರದಂದು ಬಿಡುಗಡೆಗೊಳಿಸಿದೆ. ಸೆಪ್ಟಂಬರ್ 16ರಂದು ನಿಮ್ರಿತಾ ಮೃತದೇಹ ಆಕೆಯ ಹಾಸ್ಟೆಲ್ ಕೋಣೆಯ ಸೀಲಿಂಗ್ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈಕೆ ಡೆಂಟಲ್ ಸರ್ಜರಿ ವಿಷಯದಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗವನ್ನು ಮಾಡುತ್ತಿದ್ದಳು.

ಇಲ್ಲಿನ ಮಹಿಳಾ ವೈದ್ಯಕೀಯ-ಕಾನೂನು ಅಧಿಕಾರಿಯಾಗಿರುವ ಡಾ. ಅಮೃತಾ ಅವರ ಪ್ರಕಾರ ಕುತ್ತಿಗೆ ಭಾಗಕ್ಕೆ ಬಲವಾದ ಬಿಗಿತ ಉಂಟಾಗಿರು ಕಾರಣದಿಂದ ಉಸಿರುಕಟ್ಟಿಸಿದ ಸ್ಥಿತಿಯಲ್ಲಿ ನಿಮ್ರಿತಾ ಸಾವು ಸಂಭವಿಸಿರುವುದು ಈ ವರದಿಯಿಂದ ದೃಢಪಟ್ಟಿದೆ.

ಯುವತಿಯ ಬಟ್ಟೆಗಳ ಮೇಲಿದ್ದ ವೀರ್ಯದ ಕಲೆಗಳ ಆಧಾರದಲ್ಲಿ ನಡೆಸಲಾದ ಡಿ.ಎನ್.ಎ. ಪರೀಕ್ಷೆಯಲ್ಲಿ ಪುರುಷ ಡಿ.ಎನ್.ಎ. ಪತ್ತೆಯಾಗಿದೆ ಮತ್ತು ಬಲವಂತದ ಲೈಂಗಿಕ ಕ್ರಿಯೆ ಪತ್ತೆಗಾಗಿ ನಡೆಸಲಾದ ಸ್ತ್ರೀ ಜನನಾಂಗ ಭಾಗದ ತುಣುಕು ಪರೀಕ್ಷೆ ಪಾಸಿಟಿವ್ ಫಲಿತಾಂಶವನ್ನು ನೀಡಿದೆ.

ನಿಮ್ರಿತಿ ಯಾವುದೇ ರೀತಿಯ ಖಿನ್ನತೆಯಿಂದ ಬಳಲುತ್ತಿರಲಿಲ್ಲ ಮತ್ತು ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯ ಹೆಣ್ಣೇ ಅಲ್ಲ ಬದಲಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಯುವತಿಯ ಸಹೋದರ ಈ ಹಿಂದೆ ಮಾಡಿದ್ದ ಆರೋಪಗಳನ್ನು ಈ ಅಟಾಪ್ಸಿ ವರದಿ ಪುಷ್ಠೀಕರಿಸುವಂತಿದೆ.

Advertisement

ನಿಮ್ರಿತಿ ಸಾವಿನ ಸುದ್ದಿ ಹೊರಬಿದ್ದ ಬಳಿಕ ಈ ಭಾಗದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು ಇದಕ್ಕೆ ಮಣಿದಿದ್ದ ಇಲ್ಲಿನ ಸಿಂಧ್ ಸರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಸಿಂಧ್ ಉಚ್ಛನ್ಯಾಯಾಲಯದ ನ್ಯಾಯಾಧೀಶರ ನಿರ್ದೇಶನದಂತೆ ಲರ್ಕಾನಾ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಕೊಲೆ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ ಮತ್ತು ಈ ತನಿಖೆ ಇದೀಗ ಪ್ರಗತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next