Advertisement

65 ರೂ.ಗೆ ಪಾಕ್‌ ಕ್ರಿಕೆಟಿಗ ಉಮರ್‌ ಅಕ್ಮಲ್‌ ಮಾರಾಟ!

06:45 AM Mar 05, 2018 | |

ಕರಾಚಿ: ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌)ನಲ್ಲಿ ಕಳಪೆ ಆಟ ಪ್ರದರ್ಶಿಸಿರುವ ಉಮರ್‌ ಅಕ್ಮಲ್‌ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆದರೆ ಪಾಕಿಸ್ತಾನದ ಅಭಿಮಾನಿಯೊಬ್ಬ ಪಾಕ್‌ ಆಟಗಾರನನ್ನು ಇ-ಬೇನಲ್ಲಿ 65 ರೂ.(1 ಡಾಲರ್‌)ಗೆ ಮಾರಾಟಕ್ಕಿಟ್ಟು ವಿಶಿಷ್ಟವಾಗಿ ಟೀಕೆ ಮಾಡಿ ಸಿಟ್ಟು ತೀರಿಸಿಕೊಂಡಿದ್ದಾನೆ. ಇದಕ್ಕೆ ಹಲವಾರು ಮಂದಿ ಸ್ವಾರಸ್ಯಕರವಾಗಿ ಉತ್ತರ ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


ಏನಿದು ಸ್ವಾರಸ್ಯ?: ಭಾರತದಲ್ಲಿ ಐಪಿಎಲ್‌ ಇರುವಂತೆ ಪಾಕಿಸ್ತಾನ ದುಬೈನಲ್ಲಿ ಪಾಕ್‌ ಸೂಪರ್‌ ಲೀಗ್‌ ಟ20 ಕ್ರಿಕೆಟ್‌ ಕೂಟ ಆಯೋಜಿಸಿದೆ. ಪ್ರಸ್ತುತ ವರ್ಷ ಬಲಾಡ್ಯ ತಂಡಗಳ ನಡುವೆ ಕದನ ನಡೆಯುತ್ತಿದೆ. ಲಾಹೋರ್‌ ಖಲಂದರ್ ಕೂಡ ಕೂಟದಲ್ಲಿರುವ ಪ್ರಮುಖ ತಂಡಗಳಲ್ಲಿ ಒಂದು. ಬ್ರೆಂಡನ್‌ ಮೆಕಲಂ ಈ  ತಂಡದ ನಾಯಕ. ತಮೀಮ್‌ ಇಕ್ಬಾಲ್‌, ಡ್ವೇನ್‌ ಬ್ರಾವೋ, ಮೊಹಮ್ಮದ್‌ ಹಫೀಜ್‌ ರಂತಹ ಘಟಾನುಘಟಿಗಳು ತಂಡದಲ್ಲಿ ಇದ್ದಾರೆ. ಇವರಲ್ಲಿ ಉಮರ್‌ ಅಕ್ಮಲ್‌ ಕೂಡ ಒಬ್ಬರು. ಆದರೆ ಉಮರ್‌ ಈ ಬಾರಿ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಒಟ್ಟಾರೆ ಇವರ ತಂಡ 5 ಪಂದ್ಯಗಳನ್ನು ಆಡಿದ್ದು ಐದರಲ್ಲೂ ಸೋಲುಂಡು ಹೀನಾಯ ಪರಿಸ್ಥಿತಿಯಲ್ಲಿದೆ.

Advertisement

ಇದರಿಂದಾಗಿ ಅಭಿಮಾನಿ ಸಾಧಿಕ್‌ ಎನ್ನುವವರು ರೊಚ್ಚಿಗೆದ್ದಿದ್ದಾರೆ. ತಂಡದ ಸೋಲಿಗೆ ಪ್ರಮುಖ ಕಾರಣವಾಗಿರುವ ಉಮರ್‌ ಅಕ್ಮಲ್‌ ಅವರ ಫೋಟೋವನ್ನು ಇ-ಬೇನಲ್ಲಿ ಪ್ರಕಟಿಸಿ ಅವರನ್ನು 1 ಡಾಲರ್‌ಗೆ ಮಾರಾಟಕ್ಕಿಟ್ಟಿದ್ದಾರೆ. ಒಟ್ಟಾರೆ ತಂಡವನ್ನೂ ತೆಗೆದುಕೊಳ್ಳಬಹುದು ಎಂದು ಅವರು ಪ್ರಕಟಿಸಿದ್ದಾರೆ. ಉಮರ್‌ ಅಕ್ಮಲ್‌ ದ್ರಾಕ್ಷಿ ತಿನ್ನುತ್ತಿರುವ ಫೋಟೋ ಇದಾಗಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೂಬ್ಬ ಅಭಿಮಾನಿ ದ್ರಾಕ್ಷಿ ದರವೂ ಸೇರಿದಂತೆ 1 ಡಾಲರ್ರಾ? ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇಷ್ಟು ಮೊತ್ತವೂ ಜಾಸ್ತಿಯಾಯಿತು ಎಂದಿದ್ದಾರೆ.

ಹಿಂದೆ ವಹಾಬ್‌ ಮಾರಾಟ: 2017ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕ್‌ ವೇಗಿ ವಹಾಬ್‌ ರಿಯಾಜ್‌ ಕಳಪೆ ಪ್ರದರ್ಶನ ನೀಡಿದ್ದರು. ಇದಕ್ಕೆ ಅಭಿಮಾನಿಯೊಬ್ಬ ವಹಾಬ್‌ರನ್ನು ಇ-ಬೇನಲ್ಲಿ ಮಾರಾಟಕ್ಕಿಟ್ಟಿದ್ದೇನೆ ಎಂದು ಪ್ರಕಟಿಸಿದ್ದು ಭಾರೀ ಸುದ್ದಿಯಾಗಿತ್ತು.

ಪಾಕ್‌ ಲೀಗ್‌ನಲ್ಲಿ ಕೊಹ್ಲಿ ಆಡಲಿ
ವಿರಾಟ್‌ ಕೊಹ್ಲಿಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಅಂತೆಯೇ ಪಾಕಿಸ್ತಾನದಲ್ಲೂ ಕೊಹ್ಲಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ ಅನ್ನುವುದು ನಿಜ. ಪಾಕಿಸ್ತಾನ ಸೂಪರ್‌ ಲೀಗ್‌ ವೇಳೆ ಅಭಿಮಾನಿಯೊಬ್ಬ “ವಿ ವಾಂಟ್‌ ಟು ಸಿ ಕೊಹ್ಲಿ ಪ್ಲೇಯಿಂಗ್‌ ಪಿಎಸ್‌ಎಲ್‌’ ಎಂದು ಬರೆದ ಫ‌ಲಕ ಹಿಡಿದಿದ್ದಾನೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಕೊಹ್ಲಿ ಬಂದು ಇಲ್ಲಿ ಆಡಲಿ ಎನ್ನುವ ಪ್ರಕಟಣೆಗಳನ್ನು ಹಾಕಿಕೊಂಡಿದ್ದಾರೆ. ಅಷ್ಟು ಮೊತ್ತಕ್ಕೆ ಮಾರಾಟವಾಗಬಲ್ಲ ವಿಶ್ವದ ಶ್ರೀಮಂತ ಕ್ರಿಕೆಟಿಗ ನಿಮ್ಮ ಪಿಎಸ್‌ಎಲ್‌ನಲ್ಲಿ ಆಡಲು ಸಾಧ್ಯವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಕೊಹ್ಲಿ ಖರೀದಿಸುವಷ್ಟು ಹಣ ನಿಮ್ಮಲ್ಲಿ ಇದೆ‌ಯೇ ಎಂದು ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next