ಜಮ್ಮುವಿನ ಸಂಜ್ವಾನ್ ಸೇನಾ ಶಿಬಿರದ ಮೇಲೆ ಪಾಕಿಸ್ಥಾನಿ ಉಗ್ರರು ದಾಳಿ ಮಾಡಿ ಐವರು ಸೈನಿಕರು ಹಾಗೂ ಓರ್ವ ನಾಗರಿಕನನ್ನು ಕೊಂದಿರುವ ಘಟನೆ ಮತ್ತೂಮ್ಮೆ ನಮ್ಮ ಗುಪ್ತಚರ ಪಡೆಯ ವೈಫಲ್ಯವನ್ನು ಜಗಜ್ಜಾಹೀರುಗೊಳಿಸಿದೆ. ಸಂಸತ್ ಮೇಲೆ ದಾಳಿ ಮಾಡಿದ ಪ್ರಕರಣದ ಉಗ್ರ ಅಫjಲ್ ಗುರುವನ್ನು ನೇಣಿಗೇರಿಸಿದ ದಿನವಾದ ಫೆ. 9ರಂದೇ ಸಂಜ್ವಾನ್ ನೆಲೆಯ ಮೇಲೆ ಉಗ್ರರು ಎರಗಿದ್ದಾರೆ.
ಫೆ.9ರಂದು ಈ ಮಾದರಿಯ ದಾಳಿಯಾಗಬಹುದು ಎಂಬ ಸಾಮಾನ್ಯ ಮುನ್ನೆಚ್ಚರಿಕೆಯನ್ನು ನೀಡಿದ್ದು ಬಿಟ್ಟರೆ ಗುಪ್ತಚರ ಪಡೆ ನಿರ್ದಿಷ್ಟವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗುತ್ತಿದೆ. ಗುಪ್ತಚರ ಪಡೆ ಮತ್ತು ಭದ್ರತಾ ಪಡೆಯ ಇಂತಹ ವೈಫಲ್ಯಗಳಿಂದಲೇ ಉಗ್ರರು ಪದೇ ಪದೆ ದಾಳಿ ಮಾಡುತ್ತಿದ್ದಾರೆ. ಪಠಾಣ್‌ಕೋಟ್ ಹಾಗೂ ಉರಿಯ ಬಳಿಕ ಸೇನಾ ನೆಲೆಯ ಮೇಲೆ ನಡೆದಿರುವ ದೊಡ್ಡ ದಾಳಿಯಿದು. ಅಜರ್ ಮೆಹಮೂದ್ ನೇತೃತ್ವದ ಜೈಶ್-ಎ-ಮೊಹಮ್ಮದ್ ಸಂಘಟನೆ ಯಾವುದೇ ಅಂಜಿಕೆಯಿಲ್ಲದೆ ದಾಳಿ ತಾನೇ ಮಾಡಿದ್ದೇನೆ ಎಂದು ಹೇಳಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಪಾಕ್ ಸೈನಿಕರ ಗಡಿ ತಂಟೆಯೂ ಅತಿ ಎನಿಸುವಷ್ಟು ಹೆಚ್ಚಾಗಿದೆ. ಕಳೆದ ವರ್ಷ 900ಕ್ಕೂ ಹೆಚ್ಚು ಸಲ ಕದನ ವಿರಾಮ ಉಲ್ಲಂಘನೆ ಮಾಡಲಾಗಿತ್ತು. ಈ ವರ್ಷ ಈಗಾಗಲೇ 20 ಯೋಧರು ಮತ್ತು ನಾಗರಿಕರು ಪಾಕಿಸ್ಥಾನದ ಗಡಿಯಾಚೆಗಿನ ಶೆಲ್ ದಾಳಿಗೆ ಬಲಿಯಾಗಿದ್ದಾರೆ. ಇಷ್ಟರ ತನಕ ಕಾಶ್ಮೀರದಲ್ಲಿ ಮಾತ್ರ ಉಗ್ರರು ದಾಳಿ ಮಾಡುತ್ತಿದ್ದರು. ಈಗ ದಾಳಿ ನಡೆದಿರುವ ಸಂಜ್ವಾನ್ ಇರುವುದು ಜಮ್ಮುವಿನಲ್ಲಿ. ಬಹುತೇಕ ಶಾಂತಿಯ ಪ್ರದೇಶ ಎಂದು ಭಾವಿಸಲ್ಪಟ್ಟಿದ್ದ ಜಮ್ಮುವಿಗೂ ಹಿಂಸಾಚಾರ ಕಾಲಿಟ್ಟಿರುವುದು ಕಳವಳಪಡಬೇಕಾದ ವಿಚಾರ. ಭಾರತದ ಸತತ ಪ್ರಯತ್ನದ ಫಲವಾಗಿ ಜಾಗತಿಕವಾಗಿ ಒಂಟಿಯಾಗಿದ್ದರೂ ಪಾಕ್ ಗಡಿಯಾಚೆಗಿನ ದಾಳಿ ಮತ್ತು ಉಗ್ರರನ್ನು ಛೂ ಬಿಟ್ಟು ಮಾಡುವ ದಾಳಿಗಳನ್ನು ನಿಲ್ಲಿಸಿಲ್ಲ. ಏನೇ ಮಾಡಿದರೂ ಆ ಧೂರ್ತ ರಾಷ್ಟ್ರ ಬುದ್ಧಿ ಕಲಿಯುವುದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಇದೇ ವೇಳೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕಾಶ್ಮೀರದಲ್ಲಿ ರಕ್ತಪಾತ ನಿಲ್ಲಬೇಕಾದರೆ ಪಾಕಿಸ್ಥಾನದ ಜತೆಗೆ ಮರಳಿ ಮಾತುಕತೆ ಪ್ರಾರಂಭಿಸಬೇಕೆಂದು ಹೇಳಿರುವುದು ವಿವಾದಕ್ಕೀಡಾಗಿದೆ.
ಪಾಕ್ ಜತೆಗೆ ಮಾತುಕತೆ ನಡೆಸಿದ ಕೂಡಲೇ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗುವುದಿದ್ದರೆ ಆ ಕೆಲಸವನ್ನು ಎಂದೋ ಮಾಡಬಹುದಿತ್ತು. ಆದರೆ ಒಂದೆಡೆ ಶಾಂತಿ ಮಾತುಕತೆ ನಡೆಸುವುದು ಹಾಗೂ ಇನ್ನೊಂದೆಡೆಯಿಂದ ದಾಳಿ ಮಾಡುವ ಕುಟಿಲ ಬುದ್ಧಿಯನ್ನು ಪಾಕ್ ತೋರಿಸುತ್ತಿರುವುದರಿಂದ ನರೇಂದ್ರ ಮೋದಿ ನೇತೃತ್ವದ ಸರಕಾರ ಮಾತುಕತೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. ಮಾತುಕತೆ ನಡೆಯಬೇಕಾದರೆ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಬೇಕು ಎಂದು ಭಾರತ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆದರೆ ಇದಕ್ಕೆ ಕ್ಯಾರೇ ಎನ್ನದ ಪಾಕ್ ನಿರಂತರವಾಗಿ ಉಗ್ರರನ್ನು ಕಳುಹಿಸುತ್ತಿದೆ. ಅಮೆರಿಕ ಮತ್ತು ವಿಶ್ವಸಂಸ್ಥೆಯ ಒತ್ತಡ ಇರುವ ಹೊರತಾಗಿಯೂ ತನ್ನ ನೆಲದಲ್ಲಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾತುಕತೆ ನಡೆಸಿ ಏನು ಪ್ರಯೋಜನ?
ಸಂಜ್ವಾನ್ ದಾಳಿಯ ಬೆನ್ನಿಗೆ ಪಾಕ್‌ಗೆ ಭಾರತ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ನಡೆಸುವ ಸಾಧ್ಯತೆ ಇದೆ ಎಂಬ ಭೀತಿ ಆವರಿಸಿಕೊಂಡಿದೆ. ಹೀಗಾಗಿಯೇ ಅದು ಇಂದು ಮತ್ತೂಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಸಾಹಸ ಮಾಡಬೇಡಿ ಎಂದು ಎಚ್ಚರಿಸಿದೆ. ಈ ಮೂಲಕ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿರುವುದು ನಿಜ ಎನ್ನುವುದನ್ನು ಒಪ್ಪಿಕೊಂಡಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಯಾವ ಸುಧಾರಣೆಯೂ ಆಗದೆ ಇರುವುದರಿಂದ ಪಾಕಿಸ್ಥಾನದ ಜತೆಗೆ ಮಾತುಕತೆ ನಡೆಸುವುದರಿಂಧ ಪ್ರಯೋಜನ ಇಲ್ಲ.
ಹಾಗೊಂದು ವೇಳೆ ಮಾತುಕತೆ ನಡೆಸುವ ಪ್ರಯತ್ನಕ್ಕೆ ಮುಂದಾದರೂ ಪಾಕಿಸ್ಥಾನದ ಉಗ್ರ ಸಂಘಟನೆಗಳಿಗೆ ಅದು ಪಥ್ಯವಾಗುವುದಿಲ್ಲ. ಸದ್ಯ ಪಾಕ್ ಸರಕಾರ ಭಯೋತ್ಪಾದಕರ ಮರ್ಜಿಯಲ್ಲಿದೆ. ಇಂದಿನ ಸರ್ಜಿಕಲ್ ಎಚ್ಚರಿಕೆ ಬಂದಿರುವುದು ಪಾಕ್ ಸರಕಾರದಿಂದ ಮಾತ್ರವಲ್ಲ ಜೈಶ್ ಸಂಘಟನೆಯಿಂದಲೂ ಎನ್ನುವುದು ಗಮನಾರ್ಹ ಅಂಶ. ಜೈಶ್ ನೀಡಿರುವ ಈ ಹೇಳಿಕೆಯನ್ನು ಪಾಕ್ ಸರಕಾರ ಕನಿಷ್ಠ ಖಂಡಿಸುವ ಅಥವ ರಾಜತಾಂತ್ರಿಕ ವಿಚಾರಗಳಲ್ಲಿ ಮೂಗುತೂರಿಸಬೇಡಿ ಎಂದು ಹೇಳುವ ದಿಟ್ಟತನವನ್ನೂ ತೋರಿಸಿಲ್ಲ. ಇಂತಹ ಸರಕಾರದ ಜತೆಗೆ ಮಾತುಕತೆ ನಡೆಸುವುದಾದರೂ ಹೇಗೆ? ಸದ್ಯಕ್ಕೆ ಬೇಕಾಗಿರುವುದು ಶಾಂತಿ ಮಂತ್ರವಲ್ಲ, ಏಟಿಗೆ ಎದಿರೇಟು ನೀಡಿ ಬುದ್ಧಿ ಕಲಿಸುವ ಕೆಚ್ಚು.