ಹೊಸದಿಲ್ಲಿ : ಪದೇ ಪದೇ ಕದನ ವಿರಾಮ ಉಲ್ಲಂಘನೆ ಗೈದು ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಹಾಗೂ ಶೆಲ್ ದಾಳಿ ನಡೆಸುವ ಪಾಕ್ ಸೇನೆಯ ಮೇಲೆ ಭಾರತೀಯ ಸೇನಾ ಪಡೆ ಮತ್ತು ಗಡಿ ಭದ್ರತಾ ಪಡೆ ರೌದ್ರಾವತಾರ ತೋರುತ್ತಿರುವ ಕಾರಣ ಭಾರೀ ನಾಶ, ನಷ್ಟ, ಜೀವಹಾನಿಗೆ ಗುರಿಯಾಗಿರುವ ಪಾಕ್ ಸೇನೆ, ಐಎಸ್‌ಐ ಮತ್ತು ನುಸುಳುಕೋರ ಉಗ್ರರು ತೀವ್ರವಾಗಿ ಕಂಗಾಲಾಗಿದ್ದಾರೆ. ಬದುಕಿದರೆ ಬೇಡಿ ತಿಂದೇನು ಎಂಬಂತೆ ತಮ್ಮ ಜೀವ ಉಳಿಸಿಕೊಳ್ಳುವುದಕ್ಕಾಗಿ ಸಿಕ್ಕ ಸಿಕ್ಕೆಡೆಗೆ ಓಡುತ್ತಿದ್ದಾರೆ ಎಂದು ಭಾರತೀಯ ಗುಪ್ತಚರ ವರದಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆ ಮತ್ತು ಬಿಎಸ್‌ಎಫ್ ಗೆ ಗಡಿ ರಕ್ಷಣೆ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿರುವ ಪರಿಣಾಮವಾಗಿ ಪಾಕಿಸ್ಥಾನ ನಿರೀಕ್ಷೆಯೇ ಮಾಡಿರದ ರೀತಿಯಲ್ಲಿ ಅದರ ಸೇನೆ ಮತ್ತು ಐಎಸ್‌ಐ ಅನ್ನು ಭಾರತೀಯ ಸೇನೆ ಮನಸೋ ಇಚ್ಛೆ ಬಗ್ಗು ಬಡಿಯುತ್ತಿದೆ.
ಇದರ ಪರಿಣಾಮವಾಗಿ ಪಾಕ್ ಸೇನೆ, ಐಎಸ್‌ಐ ಮತ್ತು ಉಗ್ರ ಸಂಘಟನೆಗಳಿಗೆ ಭಾರತ ವಿರೋಧಿ ಕೃತ್ಯದಲ್ಲಿ ತೊಡಗುವುದು ಈಗ ಬಹುತೇಕ ಆಸಾಧ್ಯವಾಗಿದೆ. ಹಾಗೆ ತೊಡಗಿದ್ದೇ ಆದಲ್ಲಿ ಅವರು ಜೀವ ಕಳೆದುಕೊಳ್ಳುವುದು ಅವರಿಗೇ ಖಚಿತವೆನಿಸಿದೆ.
ಇದಕ್ಕೆ ಮುಖ್ಯ ಕಾರಣ ಭಾರತ ತನ್ನ ಗಡಿಯ ಉದ್ದಕ್ಕೂ ಕೈಗೊಂಡಿರುವ ನಿರಂತರ ವೈಮಾನಿಕ ವಿಚಕ್ಷಣೆ ಮತ್ತು ಗರಿಷ್ಠ ಮಟ್ಟದ ಕಾವಲು ವ್ಯವಸ್ಥೆ. ಇದು ಪಾಕಿಸ್ಥಾನದ ಕುಪ್ರಸಿದ್ಧ ಬಾರ್ಡರ್ ಆ್ಯಕ್ಷನ್ ತಂಡಕ್ಕೆ (ಬ್ಯಾಟ್ ಗೆ) ಜೀವಕ್ಕೆ ಇಟ್ಟುಕೊಂಡಿದೆ.
2017ರಲ್ಲಿ ಭಾರತೀಯ ಸೇನೆ ಕೈಗೊಂಡ ಹಲವು ಬಗೆಯ ವ್ಯೂಹಾತ್ಮಕ ಗಡಿ ಕಾರ್ಯಾಚರಣೆಯ ಫಲವಾಗಿ 138 ಪಾಕ್ ಸೈನಿಕರು ಹತರಾಗಿರುವುದು ಪಾಕ್ ಸರಕಾರಕ್ಕೆ, ಐಎಸ್‌ಐಗೆ ನುಂಗಲಾರದ ತುತ್ತಾಗಿದೆ.
ಪಾಕಿಸ್ಥಾನ ಪ್ರತೀ ಸಲ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸಿದಾಗ ಭಾರತೀಯ ಸೇನೆ, ಪಾಕ್ ಸೈನಿಕರ ಹುಟ್ಟಡಗಿಸುವ ರೀತಿಯಲ್ಲಿ ಅತ್ಯಂತ ಪ್ರಬಲ ಮರು ದಾಳಿಗಳನ್ನು ನಡೆಸಿ ಗಮನಾರ್ಹ ಸಂಖ್ಯೆಯ ಪಾಕ್ ಸೈನಿಕರನ್ನು ಬಲಿತೆಗೆದುಕೊಂಡಿದೆ.
ಗಡಿಯಲ್ಲಿ ಪಾಕ್ ನುಸುಳುಕೋರ ಉಗ್ರರಿಗೆ ಮಾರ್ಗದರ್ಶನ, ನೆರವು ನೀಡುವ ಸಲುವಾಗಿ ಪಿಓಕೆ ಗಡಿಯಲ್ಲಿ ವಾಸವಾಗಿರುವ ನಿವೃತ್ತ ಪಾಕ್ ಸೈನಿಕರು, ಅಧಿಕಾರಿಗಳ ನಿವಾಸಗಳನ್ನೇ ಗುರಿ ಇರಿಸಿ ಭಾರತೀಯ ಪಡೆ ಭಾರೀ ದಾಳಿ ನಡೆಸಿದೆ.
ಕಳೆದ ವರ್ಷದ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಿಓಕೆ ಗಡಿಯಲ್ಲಿನ ಉಗ್ರರ ತರಬೇತಿ ಶಿಬಿರಗಳನ್ನು ಭಾರತೀಯ ಸೇನೆ ಸಾರಾಸಗಟು ನಾಶ ಮಾಡಿ ಹಾಕಿ ಲೆಕ್ಕವಿಲ್ಲದಷ್ಟು ಉಗ್ರರನ್ನು ಹತ್ಯೆಗೈದಿದೆ ಎಂದು ಗುಪ್ತಚರ ವರದಿ ಹೇಳಿದೆ.