Advertisement

ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳ ಹಿಂದೆ ಪಾಕ್ ಸೇನೆಯ ಕುಮ್ಮಕ್ಕು

09:51 AM Aug 03, 2019 | Hari Prasad |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ಥಾನ ಸೈನ್ಯದ ನೇರ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಭಾರತೀಯ ಸೇನೆ ಮಾಡಿದೆ. ಜಮ್ಮು-ಕಾಶ್ಮೀರದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಸೇನೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಚಿನಾರ್ ಕಾರ್ಪ್ಸ್ ನ ಕಮಾಂಡರ್ ಆಗಿರುವ ಲೆಫ್ಟಿನೆಂಟ್ ಜನರಲ್ ಧಿಲ್ಲೋನ್ ಅವರು ಮಾತನಾಡುತ್ತಾ ಈ ವಿಚಾರವನ್ನು ಬಹಿರಂಗಪಡಿಸಿದರು.

Advertisement

ನಮ್ಮ ನೆಲದಲ್ಲಿ ಉಗ್ರ ಚಟುವಟಿಕೆಗಳನ್ನು ಉತ್ತೇಜಿಸುವ ಪಾಕಿಸ್ಥಾನ ಸೇನೆಯ ಎಲ್ಲಾ ವಿಧದ ಯೋಜನೆಗಳನ್ನು ನಾವು ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತೇವೆ ಮಾತ್ರವಲ್ಲದೇ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಯಾವುದೇ ಪ್ರಯತ್ನಗಳು ಯಶಸ್ವಿಯಾಗದು ಎಂದು ಧಿಲ್ಲೋನ್ ಅವರು ಉಗ್ರ ಪೋಷಕ ರಾಷ್ಟ್ರಕ್ಕೆ ನೇರ ಎಚ್ಚರಿಕೆ ನೀಡಿದರು.

ವಿವಿಧ ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಂಡಿರುವ ಸ್ಥಳೀಯರಲ್ಲಿ ಸುಮಾರು 83 ಪ್ರತಿಶತ ಯುವಕರು ಇಲ್ಲಿ ಕಲ್ಲೆಸೆತ ಪ್ರಕರಣಗಳಲ್ಲಿ ಭಾಗಿಯಾಗಿದ್ದವರೇ ಆಗಿದ್ದಾರೆ ಎಂಬ ಮಾಹಿತಿಯನ್ನೂ ಸಹ ಕಮಾಂಡರ್ ಅವರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು. ‘ಇಂದಿನ ಕಲ್ಲೆಸೆತಗಾರರೇ ನಾಳಿನ ಉಗ್ರಗಾಮಿಗಳು’ ಎಂಬ ಹೊಸ ಉಕ್ತಿಯೊಂದನ್ನು ಉಲ್ಲೇಖಿಸಿದ ಕಮಾಂಡರ್ ಧಿಲ್ಲೋನ್ ಅವರು ಕೇವಲ 500 ರೂಪಾಯಿಗಳ ಆಸೆಗೆ ಕಲ್ಲೆಸೆತ ಪ್ರಕರಣಗಳಲ್ಲಿ ಭಾಗಿಯಾಗುವ ಯುವಕರನ್ನು ಅವರ ಮನೆಯಯವರು ಮನ ಒಲಿಸಿ ವಾಸ್ತವ ಸ್ಥಿತಿಯನ್ನು ವಿವರಿಸಬೇಕೆಂದು ಅಂತಹ ಕುಟುಂಬಗಳಿಗೆ ಧಿಲ್ಲೋನ್ ಮನವಿಯನ್ನೂ ಸಹ ಮಾಡಿಕೊಂಡರು.

ಅಮರನಾಥ ಯಾತ್ರೆಯನ್ನು ಸಹ ಹಾಳುಗೆಡವಲು ಪಾಕಿಸ್ಥಾನ ಸೇನೆಯಿಂದ ಬೆಂಬಲಿತ ಉಗ್ರಗಾಮಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಖಚಿತ ಮೂಲಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿಯಂತೆ ಅಮರನಾಥ ಯಾತ್ರೆ ಸಾಗುವ ಉತ್ತರದ ಪಹಾಲ್ಗಾಮ್ ಮತ್ತು ದಕ್ಷಿಣದ ಮಾರ್ಗವಾಗಿರುವ ಬಾಲ್ಟಾಲ್ ಮಾರ್ಗಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಶೋಧ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಧಿಲ್ಲೋನ್ ಅವರು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next