ನವದೆಹಲಿ: ಭಾರತದ ರಿಯಲ್ ಹೀರೋ ಐ.ಎ.ಎಫ್. ಪೈಲಟ್ ಅಭಿನಂದನ್ ವರ್ತಮಾನ್ ಅವರ ಕಥೆಯನ್ನಾಧರಿಸಿದ ಸಿನೇಮಾ ಒಂದು ಪಾಕಿಸ್ಥಾನದಲ್ಲಿ ಸೆಟ್ಟೇರಲು ಸಿದ್ಧವಾಗಿದೆ. ಆದರೆ ಇದೊಂದು ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿರಲಿದೆ ಎಂದು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಇ.ಪಿ.ಕೆ. ಸಂಸ್ಥೆ ತಿಳಿಸಿದೆ.
‘ಅಭಿನಂದನ್ ಕಮಾನ್’ ಎಂಬ ಶೀರ್ಷಿಕೆಯನ್ನು ಈ ಚಿತ್ರಕ್ಕೆ ಇಡಲಾಗಿದ್ದು ಇಲ್ಲಿ ಅಭಿನಂದನ್ ಅವರ ಪಾತ್ರವನ್ನು ಶಮೂನ್ ಅಬ್ಬಾಸಿ ಅವರು ನಿರ್ವಹಿಸಲಿದ್ದಾರೆ. ಖಲೀಲ್ ಉರ್ ರಹಮಾನ್ ಖಮರ್ ಈ ಚಿತ್ರದ ನಿರ್ದೇಶಕ. ಸೆಪ್ಟಂಬರ್ 20ಕ್ಕೆ ಈ ಹೊಸ ಚಿತ್ರ ಸೆಟ್ಟೇರಲಿದೆ.
ಬಾಲಾಕೋಟ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಭಾರತ ಪಾಕ್ ಗಡಿಯಲ್ಲಿ ನಡೆದ ‘ಡಾಕ್ ಫೈಟ್’ ನಲ್ಲಿ ಪಾಕಿಸ್ಥಾನದ ಎಫ್ 16 ಯುದ್ಧವಿಮಾನವನ್ನು ಮಿಗ್ ಪೈಲಟ್ ಅಭಿನಂದನ್ ವರ್ತಮಾನ್ ಅವರು ಹೊಡೆದುರುಳಿಸಿದ್ದರು. ಆದರೆ ಇದೇ ಸಂದರ್ಭದಲ್ಲಿ ಅವರು ಚಲಾಯಿಸುತ್ತಿದ್ದ ಮಿಗ್ ವಿಮಾನ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಪತನಗೊಂಡ ಕಾರಣ ಅವರು ಪಾಕಿಸ್ಥಾನ ಸೈನಿಕರಿಂದ ಬಂಧಿಸಲ್ಪಟ್ಟಿದ್ದರು.
ಈ ಸಂದರ್ಭದಲ್ಲಿ ಅಭಿನಂದನ್ ತೋರಿದ ವೃತ್ತಿಪರತೆ ಮತ್ತು ಸಂಯಮ ಅವರನ್ನು ದೇಶದ ನೈಜ ಹೀರೋವನ್ನಾಗಿ ಪ್ರತಿಬಿಂಬಿಸಿತ್ತು. ಬಳಿಕ ಭಾರತದ ಜಾಣ ರಾಜತಾಂತ್ರಿಕ ನಡೆಯ ಮೂಲಕ ಅಭಿನಂದನ್ ಅವರನ್ನು ಪಾಕಿಸ್ಥಾನ ಸುರಕ್ಷಿತವಾಗಿ ಬಿಡುಗಡೆಗೊಳಿಸಿತ್ತು. ಈ ಸಂದರ್ಭದಲ್ಲಿ ಅಭಿನಂದನ್ ಅವರಿಗೆ ಅಟ್ಟಾರಿ-ವಾಘಾ ಗಡಿಯಲ್ಲಿ ವೀರೋಚಿತ ಸ್ವಾಗತ ಲಭಿಸಿತ್ತು.
ಆದರೆ ‘ಅಭಿನಂದನ್ ಕಮಾನ್’ ಚಿತ್ರದಲ್ಲಿ ಇವರ ಪಾತ್ರವನ್ನು ಯಾವ ರೀತಿಯಲ್ಲಿ ತೋರಿಸಲಾಗುತ್ತದೆ ಎನ್ನುವುದೇ ಸದ್ಯಕ್ಕೆ ಇರುವ ಕುತೂಹಲ.