Advertisement

ಪಾಕಿಸ್ಥಾನಕ್ಕೆ ಬೇಕಿಲ್ಲ ಶಾಂತಿ

10:36 AM Oct 03, 2018 | Harsha Rao |

ಇಮ್ರಾನ್‌ ಖಾನ್‌ ಅಧಿಕಾರಕ್ಕೆ ಬಂದ ನಂತರದಿಂದ ಪಾಕಿಸ್ಥಾನ ಭಾರತದ ವಿರುದ್ಧ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಇದರ ಜೊತೆಗೆ ತನ್ನ ಇಬ್ಬಗೆ ಗುಣವನ್ನೂ ಬಹಿರಂಗಮಾಡಿಕೊಳ್ಳುತ್ತಿದೆ. ಭಾರತಕ್ಕೆ ಶಾಂತಿ ಮಾತುಕತೆಯೇ ಬೇಕಾಗಿಲ್ಲ ಎನ್ನುವ ಧಾಟಿಯಲ್ಲಿ ಇತ್ತೀಚೆಗಷ್ಟೇ ಇಮ್ರಾನ್‌ ಖಾನ್‌ ಟ್ವೀಟ್‌ ಮಾಡಿದ್ದರು. ಅಲ್ಲದೇ “ದೊಡ್ಡ ಹುದ್ದೆಯಲ್ಲಿ ಕುಳಿತ ಚಿಕ್ಕ ಮನುಷ್ಯರು’ ಎಂದೂ ಭಾರತದ ನಾಯಕರ ಬಗ್ಗೆ ಕುಹಕವಾಡಿದ್ದರು.ಆದರೆ ಇಮ್ರಾನ್‌ ಕೂಡ‌ “ನಯಾ ಪಾಕಿಸ್ಥಾನದ’ ಪೋಷಾಕಿನಲ್ಲಿರುವ ಅದೇ ಹಳೆಯ ಭಾರತದ್ವೇಷಿ ಮನಸ್ಥಿತಿಯ ವ್ಯಕ್ತಿ ಎನ್ನುವುದು ಸ್ಪಷ್ಟವಾಗುತ್ತಿದೆ. ಇತ್ತೀಚೆಗಷ್ಟೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪಾಕಿಸ್ಥಾನಿ ಪ್ರಾಯೋಜಿತ ಉಗ್ರವಾದ, ಗಡಿರೇಖೆಯಲ್ಲಿ ಅದರ ಸೇನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಜಗತ್ತಿನೆದುರು ಸಾರಿದ್ದರು. ಒಸಾಮಾ ಬಿನ್‌ ಲಾಡೆನ್‌ ಮತ್ತು ಹಫೀಜ್‌ ಸಯೀದ್‌ನಂಥ ಉಗ್ರರಿಗೆ ಪಾಕ್‌ ಸ್ವರ್ಗ ಸಮಾನವಾಗಿ ಬದಲಾಗಿದೆ ಎಂದೂ ಹೇಳಿದ್ದರು. ಅವರ ಮಾತಿಗೆ ಪುಷ್ಟಿಯೆಂಬಂತೆ ಭಾನುವಾರ ಇಮ್ರಾನ್‌ ಖಾನ್‌ ಸಂಪುಟದ ಧಾರ್ಮಿಕ ವ್ಯವಹಾರಗಳ ಖಾತೆ ಸಚಿವ ನೂರ್‌ ಉಲ್‌ ಹಕ್‌ ಖಾದ್ರಿ ಮುಂಬಯಿ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ನೊಂದಿಗೆ ವೇದಿಕೆ ಹಂಚಿಕೊಂಡ ಸುದ್ದಿ ಈಗ ಬಹಿರಂಗವಾಗಿದೆ.

Advertisement

ಗಡಿ ಭಾಗದಲ್ಲೂ ಅದರ ಉಪಟಳ ಯಥಾಪ್ರಕಾರ ಮುಂದುವರಿದಿದೆ. ಅದರಲ್ಲೂ ಭಾನುವಾರವಂತೂ ಪಾಕಿಸ್ಥಾನದ ಒಂದು ಹೆಲಿಕಾಪ್ಟರ್‌ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ವಾಯು ಪ್ರದೇಶಕ್ಕೆ ಪ್ರವೇಶಿಸುವ ಉದ್ಧಟತನ ತೋರಿಸಿದೆ. ಆದಾಗ್ಯೂ ಭಾರತೀಯ ಸೈನಿಕರ ಎಚ್ಚರಿಕೆಗೆ ಬೆಚ್ಚಿ ಅದು ಹಿಂದಿರುಗಿತಾದರೂ, ಈ ಪ್ರಕರಣ ನಿಜಕ್ಕೂ ಗಂಭೀರವಾದದ್ದು. ಈ ಹೆಲಿಕಾಪ್ಟರ್‌ನಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದ ಪ್ರಧಾನ ಮಂತ್ರಿ ಮತ್ತು ಅವರ ಸರ್ಕಾರದ ಮೂವರು ಮಂತ್ರಿಗಳಿದ್ದರು, ಅವರು ಅಧಿಕೃತ ಯಾತ್ರೆ ಕೈಗೊಳ್ಳುವಾಗ ಈ ಪ್ರಮಾದವಾಯಿತು ಎಂದು ನಂತರ ಹೇಳಲಾಯಿತು. ಆದರೆ ಇಷ್ಟೊಂದು ಮಹತ್ವಪೂರ್ಣ ವ್ಯಕ್ತಿಗಳಿರುವಾಗ ಇಷ್ಟೊಂದು ದೊಡ್ಡ ತಪ್ಪು ಹೇಗಾಯಿತು ಎನ್ನುವುದೇ ಪ್ರಶ್ನೆ. ಇದರ ಹಿಂದೆ ಏನಾದರೂ ದೊಡ್ಡ ಕುತಂತ್ರ ಅಡಗಿದೆಯೇ? ಅಥವಾ ಅತಿಮಹತ್ವಪೂರ್ಣ ವ್ಯಕ್ತಿಗಳಿದ್ದಾರೆ ಎಂಬ ನಾಟಕವಾಡಿ ಪಾಕಿಸ್ಥಾನ ಗಡಿ ಪ್ರಾಂತ್ಯದಲ್ಲಿ ಗೂಢಚರ್ಯ ನಡೆಸಲು ಪ್ರಯತ್ನಿಸಿತೇ? 

ಈ ರೀತಿ ವಾಯು ಕ್ಷೇತ್ರದಲ್ಲಿ ಅತಿಕ್ರಮಣ ಮಾಡಿ ಪಾಕಿಸ್ಥಾನ ಭಾರತಕ್ಕೆ ಬಹಿರಂಗವಾಗಿಯೇ ಸವಾಲೊಡ್ಡಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿಯವರೂ ಪಾಕಿಸ್ಥಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.  ಒಂದಂತೂ ಸ್ಪಷ್ಟವಾಗಿದೆ. ಪಾಕಿಸ್ಥಾನಕ್ಕೆ ಭಾರತದೊಂದಿಗೆ ಶಾಂತಿ ಬೇಕಾಗಿಲ್ಲ. ಆದರೆ ಅದನ್ನು ಒಪ್ಪಿಕೊಳ್ಳುವ ಬದಲು ಜಗತ್ತಿನೆದುರು ಶಾಂತಿ ಮಂತ್ರ ಪಠಿಸುವ ನಾಟಕವಾಡುತ್ತಿದೆ. ಮೊದಲಿನಿಂದಲೂ ಪಾಕಿಸ್ಥಾನಿ ಸೇನೆ ಮತ್ತು ಐಎಸ್‌ಐ ಭಾರತದ ಮೇಲೆ ನಿರಂತರವಾಗಿ ಸಮರ ಸಾರುತ್ತಲೇ ಇವೆ.ಮುಂಬೈ ದಾಳಿಯಿಂದ ಹಿಡಿದು, ನಮ್ಮ ಸೈನಿಕರ ನೆಲೆಯ ಮೇಲಿನ ದಾಳಿಯವರೆಗೂ ಪಾಕಿಸ್ಥಾನದ ಕೈವಾಡವಿದೆ ಎನ್ನುವುದೂ ರುಜುವಾತಾಗಿದೆ. 

ಬೇಸರದ ಸಂಗತಿಯೆಂದರೆ, ಪಾಕಿಸ್ಥಾನದಲ್ಲಿ ಹೊಸ ಸರಕಾರ ಬಂದ ಮೇಲೆ ಆ ದೇಶ ಹಳಿಗೆ ಮರಳುತ್ತದೆ ಎಂಬ ಭರವಸೆ(ಚಿಕ್ಕದಾಗಿ) ಮೂಡಿತ್ತು. ಆದರೆ ಈಗ ಅಂಥ ಯಾವ ಸಂಕೇತಗಳೂ ಸಿಗುತ್ತಿಲ್ಲ. ಬದಲಾಗಿ ವಿಶ್ವಸಂಸ್ಥೆಯಲ್ಲಿ ಈಗ ಪಾಕಿಸ್ಥಾನ ಮತ್ತೆ ಕಾಶ್ಮೀರದ ವೃಥಾಲಾಪ ಮಾಡಿದೆ. ಪಾಕ್‌ನ ಹೊಸ ಅಧ್ಯಕ್ಷರೂ ತಮ್ಮ ಮೊದಲ ಭಾಷಣದಲ್ಲೇ ಕಾಶ್ಮೀರದ ಬಗ್ಗೆ ತಮ್ಮ ನಿಲುವು ಸ್ಪಷ್ಟ ಪಡಿಸಿದ್ದಾರೆ. 

ವಿಶ್ವಸಂಸ್ಥೆಯ ಮಹಾಸಚಿವ ಆ್ಯಂಟೋನಿಯೋ ಗುಟರೇಸ್‌ ಜಮ್ಮು-ಕಾಶ್ಮೀರದ ವಿಷಯದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ವಿಷಯವನ್ನು ಶಾಂತವಾಗಿ ಬಗೆಹರಿಸುವ ಕುರಿತೂ ಅವರು ಸಲಹೆ ನೀಡಿದ್ದಾರೆ. ಆದರೆ ಪಾಕಿಸ್ಥಾನಕ್ಕೆ ಇದೆಲ್ಲ ಕೇಳಿಸುತ್ತಲೇ ಇಲ್ಲ. ಅದು ವಿಶ್ವಸಂಸ್ಥೆಯನ್ನು ಭಾರತದ ವಿರುದ್ಧ ದ್ವೇಷ ಕಾರುವ, ಸುಳ್ಳು ಆರೋಪಗಳನ್ನು ಹರಿಬಿಡುವ ರಂಗಮಂಚ ಮಾಡಿಕೊಂಡುಬಿಟ್ಟಿದೆ. ಯಾವ ಮಟ್ಟಕ್ಕೆಂದರೆ, 2014ರಲ್ಲಿ ಪೇಶಾವರದ ಶಾಲಾ ಮಕ್ಕಳ ಮೇಲಾದ ದಾಳಿಯಲ್ಲಿ ಭಾರತದ ಕೈವಾಡವಿದೆಯೆಂದು ಅದು ಆರೋಪ ಮಾಡಿದೆ. ಆದರೆ ಈ ದಾಳಿಯನ್ನು ಮಾಡಿದ್ದು ಅಂದಿನ ಪಾಕ್‌ ಸರಕಾರದ ವಿರುದ್ಧ ಮುನಿಸಿಕೊಂಡಿದ್ದ ಉಗ್ರ ಸಂಘಟನೆಗಳು ಎನ್ನುವುದೂ ಸಾಬೀತಾಗಿದೆ. ಕೆಲ ಉಗ್ರರಿಗೆ ಶಿಕ್ಷೆಯೂ ಆಗಿದೆ. ಪಾಕಿಸ್ಥಾನ ಒಂದು ವೇಳೆ ಇದೇ ರೀತಿ ವಿಶ್ವ ವೇದಿಕೆಗಳಲ್ಲಿ ಭಾರತದ ವಿರುದ್ಧ ಅನವಶ್ಯಕವಾಗಿ ಆರೋಪ ಮಾಡುವ ಚಾಳಿಯನ್ನು ಬಿಡದೇ ಇದ್ದರೆ ನಿಸ್ಸಂಶಯವಾಗಿಯೂ ಎರಡೂ ದೇಶಗಳ ನಡುವೆ ಸಂಬಂಧ ಸುಧಾರಣೆ ಸಾಧ್ಯವೇ ಇಲ್ಲ. ಪಾಕಿಸ್ಥಾನ ತನ್ನ ತಪ್ಪುಗಳಿಂದ ಪಾಠ ಕಲಿಯದಿದ್ದರೆ ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next