ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪಾಕಿಸ್ತಾನ ಅದಕ್ಕಾಗಿ ವಿವಿಧ ತಂತ್ರಗಾರಿಕೆಯನ್ನು ಬಳಸಿಕೊಳ್ಳುತ್ತಿದೆ. ಅದರಲ್ಲಿ ಡ್ರೋನ್ ಕೂಡಾ ಒಂದಾಗಿದೆ. ಇತ್ತೀಚೆಗೆ ಪಾಕಿಸ್ತಾನ ಕಾಶ್ಮೀರ ಗಡಿಭಾಗಕ್ಕೆ ಭಯೋತ್ಪಾದಕರನ್ನು ಕಳುಹಿಸುವ ಚಾಳಿಯನ್ನು ಮುಂದುವರಿಸಿದ್ದು, ಪಂಜಾಬ್ ಮತ್ತು ರಾಜಸ್ಥಾನದ ಗಡಿಭಾಗದಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಎಸೆಯಲು ಬಳಸಿಕೊಳ್ಳುತ್ತಿದೆ. ಪಾಕ್ ನ ಈ ಡ್ರೋನ್ ಗಳನ್ನು ಭಾರತದ ಭದ್ರತಾ ಪಡೆ ಮತ್ತು ವೈಮಾನಿಕ ಪಡೆಗಳು ಸಮರ್ಥವಾಗಿ ಹೊಡೆದುರುಳಿಸುತ್ತಿವೆ. ಆದರೂ ಕೆಲವೊಂದು ಡ್ರೋನ್ ಗಳು ಭದ್ರತಾ ಪಡೆಯ ಕಣ್ತಪ್ಪಿಸಿ ಶಸ್ತ್ರಾಸ್ತ್ರಗಳನ್ನು ಭಾರತದ ಗಡಿಭಾಗದಲ್ಲಿ ಇಳಿಸುವ ಕಾರ್ಯದಲ್ಲಿ ತೊಡಗಿದೆ.
ಇನ್ಮುಂದೆ ಪಾಕ್ ಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಸರಬರಾಜು ಸಾಧ್ಯವಿಲ್ಲ!
ಡ್ರೋನ್ ಮೂಲಕ ಕಳ್ಳಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಪಾಕ್ ನ ಡ್ರೋನ್ ಗಳು ಭಾರತ ಪ್ರವೇಶಿಸಲು ತಡೆಯೊಡ್ಡುವ ಭರ್ಜರಿ ಕ್ರಮಕ್ಕೆ ಸನ್ನದ್ಧವಾಗಿದೆ.
ವರದಿಯ ಪ್ರಕಾರ, ಕೇಂದ್ರ ಸರ್ಕಾರವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್ ನಿಗ್ರಹ ತಂತ್ರಜ್ಞಾನದ ಮೊರೆ ಹೋಗುವ ಮೂಲಕ ಮುಂದಿನ ಆರು ತಿಂಗಳಲ್ಲಿ ಪಾಕಿಸ್ತಾನದ ಗಡಿಯಾದ್ಯಂತ ಈ ವ್ಯವಸ್ಥೆಯನ್ನು ನಿಯೋಜಿಸಲು ಸಿದ್ಧತೆ ನಡೆಸಿದೆ ಎಂದು ವರದಿ ವಿವರಿಸಿದೆ. ಈ ವ್ಯವಸ್ಥೆಯನ್ನು ಗುಜರಾತ್ ನಿಂದ ಜಮ್ಮು-ಕಾಶ್ಮೀರದವರೆಗೆ ಅಳವಡಿಸುವ ಮೂಲಕ ಪಾಕ್ ನ ಡ್ರೋನ್ ಗಳನ್ನು ಹೊಡೆದುರುಳಿಸಲು ಸಹಾಯಕವಾಗಲಿದೆ ಎಂದು ವರದಿ ತಿಳಿಸಿದೆ.
ಮೂರು ಕಂಪನಿಗಳು Anti Drone ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಆ ನಿಟ್ಟಿನಲ್ಲಿ ಇಂಡೋ-ಪಾಕ್ ಗಡಿಭಾಗದಲ್ಲಿ ಶೀಘ್ರವೇ ಈ ಮೂರು ಕಂಪನಿಗಳು ಅಭಿವೃದ್ಧಿಪಡಿಸಿದ ಡ್ರೋನ್ ನಿಗ್ರಹ ತಂತ್ರಜ್ಞಾನದ ಡಿಸೈನ್ ಅನ್ನು ಆಯ್ಕೆ ಮಾಡಿ ಪರೀಕ್ಷಿಸಲಾಗುತ್ತಿದೆ. ಈ ಡ್ರೋನ್ ನಿಗ್ರಹ ತಂತ್ರಜ್ಞಾನ ಅಕ್ರಮ ಡ್ರೋನ್ ಹಾರಾಟದ ಮೇಲೆ ನಿಗಾ ಇಡಲಿದ್ದು, ರೌಂಡ್ ದ ಕ್ಲಾಕ್ ನಲ್ಲಿ ಕಾರ್ಯನಿರ್ವಹಿಸುವ ಈ ತಂತ್ರಜ್ಞಾನದಿಂದ ಕೆಲವೇ ಸೆಕೆಂಡುಗಳಲ್ಲಿ ಇಂತಹ ಡ್ರೋನ್ ಅನ್ನು ಪತ್ತೆ ಹಚ್ಚಿ, ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವುದಾಗಿ ವರಿ ತಿಳಿಸಿದೆ.
ಕಳೆದ ವರ್ಷ ಗಡಿಭದ್ರತಾ ಪಡೆ ಸುಮಾರು 107 ಡ್ರೋನ್ ಗಳನ್ನು ಹೊಡೆದುರುಳಿಸಿತ್ತು. 20203ರಲ್ಲಿ ಇಂಡೋ-ಪಾಕ್ ಗಡಿಯಲ್ಲಿ 450ಕ್ಕೂ ಅಧಿಕ ಪಾಕಿಸ್ತಾನದ ಡ್ರೋನ್ ಗಳು ಕಾಣಿಸಿಕೊಂಡಿರುವುದಾಗಿ ತಿಳಿಸಿದೆ. ಅಲ್ಲದೇ ಇಂಡೋ-ಪಾಕ್ ಗಡಿ ಮೂಲಕ ಪಾಕಿಸ್ತಾನದ ಭಯೋತ್ಪಾದಕರು ಒಳನುಸುಳುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಡೆಬೇಲಿ ನಿರ್ಮಾಣ ಮಾಡಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.