Advertisement

ಭಾರತದ ವಿರುದ್ಧ ಪಾಕ್‌ ಮಾನಸಿಕ ಅಸ್ವಸ್ಥ ಅಸ್ತ್ರ !?

01:09 AM Dec 09, 2024 | Team Udayavani |

ಹೊಸದಿಲ್ಲಿ: ಭಾರತದ ಜೈಲುಗಳಲ್ಲಿರುವ ಉಗ್ರರಿಗೆ ಸಂದೇಶ ರವಾನಿಸಲು ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಹೊಸ ತಂತ್ರವೊಂದನ್ನು ಹೆಣೆದಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Advertisement

ಮಾದಕ ವ್ಯಸನಿಗಳನ್ನು ಅಥವಾ ಮಾನಸಿಕ ಅಸ್ವಸ್ಥರಂತೆ ಸೋಗು ಹಾಕಿದವರನ್ನು ಭಾರತದೊಳಕ್ಕೆ ನುಸುಳಿಸಿ, ಬಳಿಕ ಅವರನ್ನು ಭಾರತದ ಜೈಲು ಸೇರುವಂತೆ ಮಾಡಿ, ಅವರ ಮೂಲಕ ಜೈಲಿನಲ್ಲಿರುವ ಉಗ್ರರಿಗೆ ತಮ್ಮ ಸಂದೇಶವನ್ನು ರವಾನಿಸುವುದೇ ಐಎಸ್‌ಐ ಹೊಸ ತಂತ್ರವಾಗಿದೆ ಎಂದು ಭದ್ರತ ಪಡೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸಕ್ತ ವರ್ಷದ ಜುಲೈಯಿಂದ ಈವರೆಗೆ ಇಂತಹ ಸುಮಾರು 10ಕ್ಕೂ ಹೆಚ್ಚು ಪ್ರಕರಣ ವರದಿಯಾಗಿರುವುದಾಗಿ ಅವರು ಹೇಳಿದ್ದಾರೆ. ಮೊಬೈಲ್‌ ಫೋನ್‌, ಇಂಟರ್ನೆಟ್‌ ಮೂಲಕ ಜೈಲಿ

ನಲ್ಲಿರುವ ಉಗ್ರರೊಂದಿಗೆ ಸಂಪರ್ಕ ಸಾಧಿಸಿದರೆ ಅದು ಭಾರತದ ಭದ್ರತ ಪಡೆಗಳಿಗೆ ಸುಲಭವಾಗಿ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಐಎಸ್‌ಐ ಈ ಹೊಸ ಕುತಂತ್ರ ಆರಂಭಿಸಿದೆ ಎನ್ನಲಾಗಿದೆ.

ಏನಿದು ಕುತಂತ್ರ?
ಡ್ರಗ್ಸ್‌ ವ್ಯಸನಿಗಳು ಅಥವಾ ಮಾನಸಿಕ ಅಸ್ವಸ್ಥರಂತೆ ವರ್ತಿಸುವವರು ಭಾರತದೊಳಕ್ಕೆ ನುಸುಳುತ್ತಾರೆ. ಅವರನ್ನು ಭಾರತದ ಭದ್ರತ ಪಡೆಗಳು ಬಂಧಿಸಿ, ಜಮ್ಮು, ಪಂಜಾಬ್‌ ಮತ್ತು ರಾಜಸ್ಥಾನದ ಜೈಲುಗಳಿಗೆ ಕಳುಹಿಸಲಾಗುತ್ತದೆ.

Advertisement

ವಾಸ್ತವದಲ್ಲಿ ಇವರು ಮಾನಸಿಕ ಅಸ್ವಸ್ಥರಾಗಿರುವುದಿಲ್ಲ. ಉದ್ದೇಶಪೂರ್ವಕವಾಗಿಯೇ ಜೈಲು ಸೇರುವ ಅವರು, ಈಗಾಗಲೇ ಜೈಲಲ್ಲಿರುವ ಭಯೋತ್ಪಾದಕರಿಗೆ ಐಎಸ್‌ಐ ಕಳುಹಿಸಿರುವ ಸಂದೇಶವನ್ನು ರವಾನಿಸುತ್ತಾರೆ. ಒಟ್ಟಿನಲ್ಲಿ ಈ ನುಸುಳುಕೋರರು ಪಾಕ್‌ ಐಎಸ್‌ಐನ ಕೊರಿಯರ್‌ಗಳಾಗಿ ಕೆಲಸ ಮಾಡುತ್ತಾರೆ.

ಗೊತ್ತಾದದ್ದು ಹೇಗೆ?
ನುಸುಳುವಿಕೆ ವೇಳೆ ಸಿಕ್ಕಿಬಿದ್ದಾಗ ಭದ್ರತ ಪಡೆಗಳು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂಬ ತರಬೇತಿಯನ್ನೂ ಅವರಿಗೆ ನೀಡ ಲಾಗಿರುಗುತ್ತದೆ. ಇತ್ತೀಚೆಗೆ ಈ ರೀತಿ ಬಂಧಿತರಾದವರು ವಿಚಾರಣೆ ವೇಳೆ ಹಾರಿಕೆ ಉತ್ತರ ನೀಡುವುದು ಹಾಗೂ ಶಂಕಾಸ್ಪದವಾಗಿ ವರ್ತಿಸುವುದು ಕಂಡುಬಂದ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ನೈಜ ಮಾಹಿತಿ ಬಹಿರಂಗಪಡಿಸಿದ್ದಾರೆ. ತಾವು ಮಾನಸಿಕ ಅಸ್ವಸ್ಥರಲ್ಲ ಎಂದೂ ತಿಳಿಸಿದ್ದಾರೆ ಎನ್ನಲಾಗಿದೆ. ರಾಜಸ್ಥಾನದ ಒಂದು ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥನ ಸೋಗಿನಲ್ಲಿ ಬಂದು ಸಿಕ್ಕಿಬಿದ್ದಿದ್ದ ವ್ಯಕ್ತಿಯು ವಿಚಾರಣೆ ವೇಳೆ, ತಾನು ಪಾಕಿಸ್ಥಾನದ ಇಬ್ಬರು ಡ್ರಗ್ಸ್‌ ದೊರೆಗಳ ಅಣತಿಯಂತೆ ಬಂದಿರುವುದಾಗಿ ತಿಳಿಸಿದ್ದ. ಜತೆಗೆ ಭಾರತಕ್ಕೆ ಡ್ರಗ್ಸ್‌ ಸಾಗಣೆ ಮತ್ತು ಬಿಎಸ್‌ಎಫ್ ಯೋಧರ ನಿಯೋಜನೆ ಬಗ್ಗೆ ಮಾಹಿತಿ ಸಂಗ್ರಹಿಸಲು ಬಂದಿರುವುದಾಗಿಯೂ ತಿಳಿಸಿದ್ದ.

ಮಹಿಳೆಯರು, ಮಕ್ಕಳ ಬಳಕೆ
ತಮ್ಮ ಕೊರಿಯರ್‌ಗಳಾಗಿ ಸೇವೆ ಸಲ್ಲಿಸಲು ಐಎಸ್‌ಐ ಪಾಕ್‌ನ ಮಹಿಳೆಯರು ಮತ್ತು ಮಕ್ಕಳನ್ನೂ ಬಳಸಿಕೊಳ್ಳುತ್ತಿದೆ. ಜುಲೈಯಲ್ಲಿ ಪಾಕ್‌ನ ಬಾಲಕನೊಬ್ಬ ಪಂಜಾಬ್‌ನಲ್ಲಿ ಸಿಕ್ಕಿಬಿದ್ದಿದ್ದ.  ಆತನ ಕೈಯಲ್ಲಿ ಅರೇಬಿಕ್‌ ಭಾಷೆಯ ಪತ್ರವೊಂದು ಸಿಕ್ಕಿತ್ತು. ಮತ್ತೂಂದು ಪ್ರಕರಣದಲ್ಲಿ ಪಾಕ್‌ ಯುವಕ ತಾನು ಸ್ನೇಹಿತೆಗಾಗಿ ಬಂದಿದ್ದಾಗಿಯೂ, ಕಾಳಿ ದೇಗುಲದಲ್ಲಿ ವಿವಾಹವಾಗಲು ಇಚ್ಛಿಸಿರುವುದಾಗಿಯೂ ಹೇಳಿದ್ದ.

ಶಿಕ್ಷೆ ಬಳಿಕ ಗಡಿಪಾರು
ಹೀಗೆ ದೇಶಕ್ಕೆ ನುಗ್ಗುವವರ ವಿರುದ್ಧ ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್‌ ಕಾಯ್ದೆ ಅಡಿ ಕೇಸು ದಾಖಲಿಸಲಾಗುತ್ತದೆ. ಅದರಂತೆ ಆರೋಪಿಗಳು 2ರಿಂದ ಗರಿಷ್ಠ 8 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಾರೆ. ಬಳಿಕ ಅವರನ್ನು ಗಡಿಪಾರು ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next