Advertisement
ಪಾಕಿಸ್ಥಾನ ಈ ಪಂದ್ಯ ಗೆದ್ದರೆ ಅದರ ಅಂಕ ನ್ಯೂಜಿಲ್ಯಾಂಡಿನೊಂದಿಗೆ ಸಮನಾಗುತ್ತದೆ (11). ಆಗ ರನ್‌ರೇಟ್‌ನಲ್ಲಿ ಮುಂದಿರುವ ಕಿವೀಸ್ ಪಡೆ ಸೆಮಿಫೈನಲ್ ತಲುಪುತ್ತದೆ, ಪಾಕ್ ಹೊರಬೀಳುತ್ತದೆ. ಯಾವ ರೀತಿಯಲ್ಲಿ ನೋಡಿದರೂ ನ್ಯೂಜಿಲ್ಯಾಂಡಿನ ರನ್‌ರೇಟ್ ಮೀರಿಸಿ ಗೆಲ್ಲುವುದು ಪಾಕಿಗೆ ಸಾಧ್ಯವಿಲ್ಲ. ಹೀಗಾಗಿ ಈಗಾಗಲೇ ನ್ಯೂಜಿಲ್ಯಾಂಡ್ 4ನೇ ಸ್ಥಾನ ಗಟ್ಟಿಪಡಿಸಿದೆ, ಸಫìರಾಜ್ ಪಡೆ ಕೂಟದಿಂದ ಹೊರಬಿದ್ದಾಗಿದೆ. ಇದಕ್ಕೆ ಅಧಿಕೃತ ಮುದ್ರೆ ಬೀಳುವುದೊಂದೇ ಬಾಕಿ.
ಇಲ್ಲಿ ಇನ್ನೊಂದು ಸಾಧ್ಯತೆ ಇದೆ. ಎಲ್ಲರೂ ಬರೀ ಪಾಕಿಸ್ಥಾನದ ಸೆಮಿಫೈನಲ್ ಕುರಿತೇ ಲೆಕ್ಕಾಚಾರ ನಡೆಸುತ್ತಿರುವ ಈ ಹೊತ್ತಿನಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡ ಬಾಂಗ್ಲಾದೇಶ ಲಾರ್ಡ್ಸ್‌ನಲ್ಲಿ ಜಯಭೇರಿ ಮೊಳಗಿಸಬಾರದೇಕೆ ಎಂಬ ಬಗ್ಗೆ ಯಾರೂ ಯೋಚಿಸಿದಂತಿಲ್ಲ. ಆಗ ಈವರೆಗಿನ ಎಲ್ಲ ಲೆಕ್ಕಾಚಾರ ಠುಸ್ ಆಗುತ್ತದೆ! ಬುಧವಾರ ಆತಿಥೇಯ ಇಂಗ್ಲೆಂಡಿಗೆ ಮಣಿದರೂ ನ್ಯೂಜಿಲ್ಯಾಂಡಿನ 4ನೇ ಸ್ಥಾನಕ್ಕೇನೂ ಧಕ್ಕೆ ಆಗಿಲ್ಲ. ಅದು +0.175ರ ರನ್‌ರೇಟ್ ಹೊಂದಿದೆ. ಪಾಕಿಸ್ಥಾನದ ರನ್‌ರೇಟ್ ಮೈನಸ್‌ನಲ್ಲಿದೆ (-0.792). ಇದನ್ನು ಮೀರಬೇಕಾದರೆ ಪಾಕ್ ಮೊದಲು ಬ್ಯಾಟಿಂಗ್ ನಡೆಸಿ ಮುನ್ನೂರಕ್ಕೂ ಹೆಚ್ಚು ರನ್ ಅಂತರದಿಂದ ಗೆಲ್ಲಬೇಕು. ಅಕಸ್ಮಾತ್ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ನಡೆಸಲು ಮುಂದಾದರೆ ಪಾಕಿಸ್ಥಾನಕ್ಕೆ ಯಾವ ಅವಕಾಶವೂ ಇಲ್ಲವಾಗುತ್ತದೆ.
Related Articles
ಈ ಎರಡೂ ತಂಡಗಳ ಅಳಿವು ಉಳಿವಿನಲ್ಲಿ ಭಾರತದ ಪಾತ್ರ ಇದ್ದುದನ್ನು ಮರೆಯುವಂತಿಲ್ಲ. ಇಂಗ್ಲೆಂಡ್ ಎದುರು ಭಾರತ ಅನುಭವಿಸಿದ ಸೋಲು ಪಾಕಿಸ್ಥಾನವನ್ನು ಸಂಕಟಕ್ಕೆ ತಳ್ಳಿತು. ಹಾಗೆಯೇ ಭಾರತದೆದುರಿನ ಪಂದ್ಯ ರದ್ದಾದ್ದರಿಂದ ನ್ಯೂಜಿಲ್ಯಾಂಡಿಗೆ ಒಂದಂಕ ಲಭಿಸಿತು. ಈ ಒಂದು ಅಂಕದ ಬಲದಿಂದಲೇ ವಿಲಿಯಮ್ಸನ್ ಪಡೆಯ ಸೆಮಿಫೈನಲ್ ಹಾದಿ ತೆರೆಯಿತು. ಅಕಸ್ಮಾತ್ ಈ ಪಂದ್ಯ ನಡೆದು ಕಿವೀಸ್ ಸೋತಿದ್ದರೆ ಆಗ ಪಾಕಿಗೆ ನಾಕೌಟ್ ಅವಕಾಶ ಹೆಚ್ಚಿರುತ್ತಿತ್ತು.
Advertisement
ಪಾಕಿಸ್ಥಾನದ ಸೆಮಿಫೈನಲ್ ಲೆಕ್ಕಾಚಾರಪಾಕಿಸ್ಥಾನ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವುದು ಪವಾಡ ಸಂಭವಿಸಿದರೂ ಸಾಧ್ಯವಾಗದು ಎಂಬುದಕ್ಕೆ ಈ ಲೆಕ್ಕಾಚಾರವೇ ಸಾಕ್ಷಿ. ರನ್‌ರೇಟ್‌ನಲ್ಲಿ ಅದು ನ್ಯೂಜಿಲ್ಯಾಂಡನ್ನು ಮೀರಿಸಬೇಕಾದರೆ ಮೊದಲು ಬ್ಯಾಟಿಂಗ್ ನಡೆಸಬೇಕು, ಕನಿಷ್ಠ 308 ರನ್ ಪೇರಿಸಬೇಕು. ಆಗ ಒಂದೂ ರನ್ ನೀಡದಂತೆ ಬಾಂಗ್ಲಾದೇಶವನ್ನು ತಡೆಯಬೇಕು! ಇದೇ ರೀತಿ ಈ ಲೆಕ್ಕಾಚಾರ ಮುಂದು ವರಿಯುತ್ತದೆ. ಪಾಕ್ 350 ರನ್ ಮಾಡಿದರೆ ಬಾಂಗ್ಲಾದ ಮೊತ್ತ 38ರ ಗಡಿ ದಾಟುವಂತಿಲ್ಲ. ಅಕಸ್ಮಾತ್ ಪಾಕ್ 500 ರನ್ ಬಾರಿಸಿತು ಎಂದಿಟ್ಟುಕೊಳ್ಳೋಣ, ಆಗ ಬಾಂಗ್ಲಾ ಮೊತ್ತವನ್ನು 175ಕ್ಕೆ ಹಿಡಿದು ನಿಲ್ಲಿಸಬೇಕು. ಮೊದಲು ಬೌಲಿಂಗ್ ಲಭಿಸಿದರೆ?
ಇವೆಲ್ಲ ಪಾಕಿಸ್ಥಾನ ಮೊದಲು ಬ್ಯಾಟಿಂಗ್ ಮಾಡಿದರೆ ನಡೆಸಲಾದ ರನ್‌ರೇಟ್ ಲೆಕ್ಕಾಚಾರ. ಒಂದು ವೇಳೆ ಪಾಕಿಸ್ಥಾನಕ್ಕೆ ಚೇಸಿಂಗ್ ನಡೆಸುವ ಅವಕಾಶ ಲಭಿಸಿದರೆ? ಯಾವ ಕಾರಣಕ್ಕೂ ಪಾಕ್ ರನ್‌ರೇಟ್ ನ್ಯೂಜಿಲ್ಯಾಂಡನ್ನು ಮೀರದು. ಈ ಉದಾಹರಣೆ ಗಮನಿಸಿ…
ಪಾಕಿಸ್ಥಾನ ಮೊದಲು ಬೌಲಿಂಗ್ ನಡೆಸಿದರೆ ಬಾಂಗ್ಲಾ ದೇಶವನ್ನು ಸೊನ್ನೆಗೇ ಆಲೌಟ್ ಮಾಡಿತು ಎಂದಿಟ್ಟುಕೊಳ್ಳೋಣ. ಗೆಲುವಿನ ಆ ಒಂದು ರನ್ ವೈಡ್ ಅಥವಾ ನೋಬಾಲ್ ಮೂಲಕ ಬಂದರೂ ಪಾಕ್ ನಿಗದಿತ ರನ್‌ರೇಟ್‌ಗಿಂತ 0.05ರಷ್ಟು ಹಿಂದೆಯೇ ಉಳಿಯುತ್ತದೆ! ಅಕಸ್ಮಾತ್ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರಕ್ಕೆ ಬಂದರೆ ಮುಗಿಯಿತು… ಆ ಕ್ಷಣದಲ್ಲೇ ಪಾಕಿಸ್ಥಾನ ಅಧಿಕೃತವಾಗಿ ಕೂಟದಿಂದ ಹೊರ ಬೀಳುತ್ತದೆ! ಹೀಗೊಂದು ಸ್ಕೋರ್ ಲೆಕ್ಕಾಚಾರ
ಪಾಕಿಸ್ಥಾನ ಮೊದಲು ಬ್ಯಾಟಿಂಗ್ ನಡೆಸಿದರೆ ಎಷ್ಟು ರನ್ ಗಳಿಸಬೇಕು, ಬಾಂಗ್ಲಾದೇಶವನ್ನು ಎಷ್ಟು ರನ್ನಿಗೆ ತಡೆದು ನಿಲ್ಲಿಸಬೇಕು ಎಂಬ ಯಾದಿ ಇಲ್ಲಿದೆ.