Advertisement

ಅಭಿನಂದನ್‌ಗೆ ಪಾಕಿಸ್ತಾನ ಹಿಂಸೆ

12:30 AM Mar 08, 2019 | |

ನವದೆಹಲಿ: ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಭಾರತಕ್ಕೆ ವಾಪಸ್‌ ಕಳುಹಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಕಂಪಗಿಟ್ಟಿಸಿಕೊಳ್ಳಲು ಯತ್ನಿಸುತ್ತಿರುವ ಪಾಕಿಸ್ತಾನದ ಕುತಂತ್ರಿ ಮುಖ ಕಳಚಿಬಿದ್ದಿದೆ. 

Advertisement

ಐಎಎಫ್ ಬಳಕೆ ಮಾಡುವ ಟ್ರಾನ್ಸ್‌ಮಿಟ್‌ ಸಂದೇಶಗಳು, ಯುದ್ಧ ವಿಮಾನಗಳು ಇರುವ ಜಾಗದ ಬಗ್ಗೆ ಮಾಹಿತಿ ನೀಡುವಂತೆ ವರ್ಧಮಾನ್‌ಗೆ ಹಿಂಸೆ ನೀಡಿರುವ ಅಂಶ ಬಯಲಾಗಿದೆ. ಇದಷ್ಟೇ ಅಲ್ಲ, ನಿದ್ದೆ ಮಾಡಲೂ ಬಿಡದ ಪಾಕ್‌ ಅಧಿಕಾರಿಗಳು, ಗಂಟೆಗಟ್ಟಲೇ ನಿಲ್ಲಿಸಿ, ಕತ್ತು ಹಿಸುಕಿ, ಥಳಿಸಿ ಹಿಂಸೆ ನೀಡಿದ್ದಾರೆ. 

ಫೆ.27 ರಂದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ವರ್ಧಮಾನ್‌ ಅವರನ್ನು ಸೆರೆ ಹಿಡಿದಿದ್ದ ಪಾಕ್‌ ಸೇನೆ, ಮಾ. 1 ರಂದು ವಾಘಾ ಗಡಿ ಮೂಲಕ ಭಾರತಕ್ಕೆ ವಾಪಸ್‌ ಕಳುಹಿಸಿತ್ತು. ಈ ಎರಡು ದಿನಗಳೂ ವರ್ಧಮಾನ್‌ಗೆ ನಾನಾ ರೀತಿಯ ಹಿಂಸೆ ನೀಡಲಾಗಿದೆ. ಈಗಾಗಲೇ ವರ್ಧಮಾನ್‌ ಕೂಡ ಪಾಕ್‌ನಲ್ಲಿ ತಮಗೆ ದೈಹಿಕ ಹಿಂಸೆಯಾಗಿಲ್ಲ, ಆದರೆ ಮಾನಸಿಕ ಹಿಂಸೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಮಾ. 1ರಂದು ವರ್ಧಮಾನ್‌ ಅವರನ್ನು ಕರೆತರಲು ವಾಘಾ ಗಡಿಗೆ ತೆರಳಿದ್ದ ಅಧಿಕಾರಿಯೊಬ್ಬರು ಪಾಕ್‌ನ ನಿಜಬಣ್ಣ ಬಯಲು ಮಾಡಿದ್ದಾರೆ.

ಎಫ್-16 ಉರುಳಿಸಿದ್ದು ಅಭಿನಂದನ್‌
ಪಾಕಿಸ್ತಾನದ ಎಫ್-16 ಅನ್ನು ಹೊಡೆದುರುಳಿಸಿದ್ದು ಅಭಿನಂದನ್‌ ವರ್ಧಮಾನ್‌ ಅವರೇ ಎಂದು ಭಾರತೀಯ ವಾಯುಪಡೆ ಪುನರುಚ್ಚರಿಸಿದೆ. ವರ್ಧಮಾನ್‌ ಅವರು ತಮ್ಮ ಮಿಗ್‌ 21 ಬಿಸೋನ್‌ನಿಂದ ಆರ್‌-73 ಮಿಸೈಲ್‌ ಅನ್ನು ಫೈರ್‌ ಮಾಡಿ ಅಮೆರಿಕ ನಿರ್ಮಿತ, ಅತ್ಯಾಧುನಿಕ ಎಫ್-16 ಅನ್ನು ಹೊಡೆದುರುಳಿಸಿದರು ಎಂದು ಹೇಳಿದೆ. ಆದರೆ, ಇನ್ನೊಂದು ಎಫ್-16ನ ಆಮ್ರಾಮ್‌ ಕ್ಷಿಪಣಿಯು, ವರ್ಧಮಾನ್‌ ಇದ್ದ ಮಿಗ್‌ 21 ಬಿಸೋನ್‌ ಅನ್ನು ಹೊಡೆದುರುಳಿಸಿತು ಎಂದು ಮಾಹಿತಿ ನೀಡಿದೆ. 

ಪಾಕ್‌ ಉಗ್ರವಾದಕ್ಕೆ ಮುಷರ್ರಫ್ ಸಾಕ್ಷ್ಯ
ತಮ್ಮ ಅಧಿಕಾರಾವಧಿಯಲ್ಲಿ ಗುಪ್ತಚರ ಮಾಹಿತಿ ಆಧರಿಸಿ ಮಸೂದ್‌ ಅಜರ್‌ ನೇತೃತ್ವದ ಜೈಶ್‌ ಎ ಮೊಹಮ್ಮದ್‌ ಭಾರತದಲ್ಲಿ ಸತತ ದಾಳಿ ನಡೆಸಿದ್ದು ಸತ್ಯ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್‌ ಮುಷರ್ರಫ್ ಜಾಗತಿಕ ಸಮುದಾಯದ ಮುಂದೆ ಸತ್ಯ ನುಡಿದಿದ್ದಾರೆ. ಈ ಮೂಲಕ ಪಾಕ್‌ ಸರ್ಕಾರಗಳೇ ಉಗ್ರ ಸಂಘಟನೆಗಳ ಮೂಲಕ ಭಾರತದಲ್ಲಿ ದಾಳಿ ನಡೆಸುತ್ತಿದ್ದವು ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ. ಸದ್ಯ ದುಬೈ ವಾಸಿಯಾಗಿರುವ ಪರ್ವೇಜ್‌ ಜೈಶ್‌ ಸಂಘಟನೆಯನ್ನು ನಿಷೇಧಿಸಲು ಹೊರಟಿರುವ ಪಾಕ್‌ ಕ್ರಮವನ್ನೂ ಸ್ವಾಗತಿಸಿದ್ದಾರೆ. ಈ ಸಂಘಟನೆ ನನ್ನನ್ನೂ ಎರಡು ಬಾರಿ ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂದು ಆರೋಪಿಸಿದ್ದಾರೆ. ನೀವು ಅಧಿಕಾರದಲ್ಲಿದ್ದಾಗ ಏಕೆ ಜೈಶ್‌ ಸಂಘಟನೆಯನ್ನು ನಿಷೇಧಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಆಗ ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಲೇ ಇತ್ತು. ಹಾಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗಲಿಲ್ಲ ಎಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next