ಲಂಡನ್ : ಗಿಲ್‌ಗಿಟ್ – ಬಾಲ್ಟಿಸ್ಥಾನವನ್ನು ತನ್ನ ಐದನೇ ಪ್ರಾಂತ್ಯವನ್ನಾಗಿ ಘೋಷಿಸಲಿರುವ ಪಾಕಿಸ್ಥಾನದ ಕ್ರಮನ್ನು ಖಂಡಿಸುವ ಗೊತ್ತುವಳಿಯೊಂದನ್ನು ಬ್ರಿಟಿಷ್ ಸಂಸತ್ತು ಪಾಸು ಮಾಡಿದೆ.
ಗಿಲ್‌ಗಿಟ್ ಮತ್ತು ಬಾಲ್ಟಿಸ್ಥಾನ, ಜಮ್ಮು ಕಾಶ್ಮೀರದ ಭಾಗವಾಗಿದ್ದು ಅದು ಭಾರತಕ್ಕೆ ಸೇರಿದುದಾಗಿದೆ ಮತ್ತು ಪಾಕಿಸ್ಥಾನವು 1947ರಿಂದಲೂ ಇದನ್ನು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದೆ ಎಂದು ಖಂಡನಾ ಗೊತ್ತುವಳಿಯಲ್ಲಿ ಹೇಳಲಾಗಿದೆ.
ಕಳೆದ ಮಾರ್ಚ್ 23ರಂದು ಈ ಗೊತ್ತುವಳಿಯನ್ನು ಕನ್‌ಸರ್ವೇಟಿವ್ ಪಕ್ಷದ ನಾಯಕ ಬಾಬ್ ಬ್ಲಾಕ್‌ಮನ್ ಅವರು ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಿದ್ದರು.
ಗಿಲ್‌ಗಿಟ್ – ಬಾಲ್ಟಿಸ್ಥಾನ ವನ್ನು ತನ್ನ ಐದನೇ ಪ್ರಾಂತ್ಯವನ್ನಾಗಿ ಘೋಷಿಸುವ ಮೂಲಕ ಪಾಕಿಸ್ಥಾನವು ಈಗಾಗಲೇ ವಿವಾದಿತವಾಗಿರುವ ಈ ಭೂಪ್ರದೇಶವನ್ನು ಒಳಹಾಕಿಕೊಳ್ಳುವ ಯತ್ನವನ್ನು ಮಾಡಿದಂತಾಗಿದೆ ಎಂದು ಗೊತ್ತುವಳಿಯಲ್ಲಿ ಹೇಳಲಾಗಿದೆ.
ಗಿಲ್‌ಗಿಟ್ – ಬಾಲ್ಟಿಸ್ಥಾನವು ಭಾರತದ ಜಮ್ಮು ಕಾಶ್ಮೀರ ರಾಜ್ಯದ ಕಾನೂನುಬದ್ಧ ಮತ್ತು ಸಾಂವಿಧಾನಿಕ ಭಾಗವಾಗಿದ್ದು ಇದನ್ನು 1947ರಿಂದ ಪಾಕಿಸ್ಥಾನ ತನ್ನ ಅಕ್ರಮ ವಶದಲ್ಲಿ ಇರಿಸಿಕೊಂಡಿದೆಯಲ್ಲದೆ ಈ ಭಾಗದ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೂ ಸೇರಿದಂತೆ ಅವರ ಮೂಲಭೂತ ಹಕ್ಕನ್ನು ನಿರಾಕರಿಸುತ್ತಲೇ ಬಂದಿದೆ ಎಂದು ಗೊತ್ತುವಳಿಯಲ್ಲಿ ವಿವರಿಸಲಾಗಿದೆ.