ಇಸ್ಲಾಮಾಬಾದ್ : ಅಮೆರಿಕದ ಒತ್ತಡಕ್ಕೆ ಮಣಿದು ಪಾಕಿಸ್ಥಾನ ಕಳೆದ ವಾರ ಸದ್ದು ಗದ್ದಲವಿಲ್ಲದೆ ಮುಂಬಯಿ ಉಗ್ರ ದಾಳಿಯಾ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ ಸಂಘಟನೆಯನ್ನು ನಿಷೇಧಿತ ಉಗ್ರ ಪಟ್ಟಿಗೆ ಸೇರಿಸಿದೆ.
ಅಮೆರಿಕ ಈ ಹಿಂದೆಯೇ ಪಾಕ್ ಮೂಲದ ಜಮಾತ್ ಉದ್ ದಾವಾ ಸಂಘಟನೆಯನ್ನು ಉಗ್ರ ಪಟ್ಟಿಗೆ ಸೇರಿಸಿ ನಿಷೇಧಿಸಿತ್ತು. ಈಗ ಪಾಕಿಸ್ಥಾನ ಕೂಡ ಜಮಾತ್ ಸಂಘಟನೆಯನ್ನು ಉಗ್ರ ಪಟ್ಟಿಗೆ ಸೇರಿಸಿ ನಿಷೇಧ ಹೇರುವ ಮೂಲಕ ಅಮೆರಿಕದ ಕಟ್ಟು ನಿಟ್ಟಿನ ಸೂಚನೆಗೆ ತಕ್ಕಂತೆ ನಡೆದುಕೊಂಡಿದೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 27 ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಯಲ್ಲಿ ಈಗಾಗಲೇ ಇರುವ ಪಾಕ್ ಮೂಲದಫರಾಹ್ ಇ ಇನ್ಸಾನಿಯತ್ ಫೌಂಡೇಶನ್ (ಎಫ್ಐಎಫ್), ಲಷ್ಕರ್ ಎ ತಯ್ಯಬ ಮತ್ತು ಹರ್ಕತ್ ಉಲ್ ಮುಜಾಹಿದೀನ್ ಮೊದಲಾದ ಹಲವಾರು ಉಗ್ರ ಸಂಘಟನೆಗೆ ಈಗ ಪಾಕ್ ಸರಕಾರದಿಂದ ನಿಷೇಧದ ಬಿಸಿ ಮುಟ್ಟುತ್ತಿದೆ.
ಉಗ್ರ ನಿಗ್ರಹ ಕಾಯಿದೆ (ಎಟಿಎ) ಗೆ ಮಾಡಿರುವ ತಿದ್ದುಪಡಿಯಿಂದಾಗಿ ಈಗಿನ್ನು ತತ್‌ಕ್ಷಣದಿಂದಲೇ ನಿಷೇಧಿಕ ಉಗ್ರ ಸಂಘಟನೆಗಳ ಆಸ್ತಿಪಾಸ್ತಿಯನ್ನು ಪಾಕ್ ಸರಕಾರ ಮುಟ್ಟುಗೋಲು ಹಾಕಲಿದೆ.
ಪಾಕ್ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಉಗ್ರ ನಿಗ್ರಹ ವಿಧೇಯಕಕ್ಕೆ ಅಧ್ಯಕ್ಷ ಮಮ್‌ನೂನ್ ಹುಸೇನ್ ಅವರು ಕಳೆದ ಶುಕ್ರವಾರವೇ ಅನುಮೋದನೆ ನೀಡಿದ್ದಾರೆ ಮತ್ತು ಅದನ್ನ ಅಂದೇ ಸಂಜೆ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.