ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಶಾಂತಿ ಮತ್ತು ಭದ್ರತೆ ಕುರಿತು ಮಾತನಾಡುತ್ತದೆ, ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಸಾಮಾ ಬಿನ್ ಲಾಡೆನ್ ನಂತಹ ಜಾಗತಿಕ ಉಗ್ರನನ್ನೂ ಹುತಾತ್ಮ ಎಂಬಂತೆ ವೈಭವೀಕರಿಸುತ್ತಿರುವುದಾಗಿ ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದ ಚರ್ಚೆಯಲ್ಲಿ ಭಾರತ ಈ ರೀತಿ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18, 346 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಹೆಚ್ಚಳ
ಪಾಕಿಸ್ತಾನ ಭಯೋತ್ಪಾದನೆಯ ತವರು ನೆಲವಾಗಿದೆ, ಭಯೋತ್ಪಾದಕರನ್ನು ಬಳಸಿಕೊಂಡು ಪಾಕ್ ನಿರಂತರವಾಗಿ ನೆರೆ ದೇಶಗಳಲ್ಲಿ ಭಯೋತ್ಪಾದಕ ಕೃತ್ಯ ಎಸಗುತ್ತಿದ್ದು, ವಿಶ್ವಸಂಸ್ಥೆಯ ಎಚ್ಚರಿಕೆಯನ್ನೂ ಗಾಳಿಗೆ ತೂರುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಅಮರನಾಥ್ ತಿರುಗೇಟು ನೀಡಿರುವುದಾಗಿ ವರದಿ ವಿವರಿಸಿದೆ.
ಪ್ರತೀ ಬಾರಿಯೂ ಪಾಕಿಸ್ತಾನ ಇಲ್ಲಿ ಶಾಂತಿ, ಭದ್ರತೆ ಬಗ್ಗೆ ಮಾತನಾಡುತ್ತದೆ. ಮತ್ತೊಂದೆಡೆ ತನ್ನದೇ ದೇಶದ ನೆಲದಲ್ಲಿ ಉಗ್ರರಿಗೆ ರಾಜಾಶ್ರಯ ನೀಡಿ ಪೋಷಿಸುವುದಲ್ಲದೇ, ಉಗ್ರರನ್ನು ಹುತಾತ್ಮರಂತೆ ಬಿಂಬಿಸುತ್ತದೆ. ಇದು ಪಾಕಿಸ್ತಾನದ ಇಬ್ಬಗೆ ನೀತಿಯಾಗಿದೆ ಎಂದು ಅಮರ್ ನಾಥ್ ಚಾಟಿ ಬೀಸಿದ್ದಾರೆ.
ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನ ಹತಾಶೆಯಿಂದ ಭಾರತದ ವಿರುದ್ಧವೇ ಸುಳ್ಳು ಆರೋಪ ಹೊರಿಸಲು ಸಾಕಷ್ಟು ವಿಫಲ ಯತ್ನ ನಡೆಸಿರುವುದಾಗಿಯೂ ಭಾರತ ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿರುವುದಾಗಿ ವರದಿ ತಿಳಿಸಿದೆ.