ಇಸ್ಲಾಮಾಬಾದ್ : ಅಮೆರಿಕದೊಂದಿಗಿನ ತನ್ನ ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ಅಮಾನತುಗೊಳಿಸಿರುವುದಾಗಿ ಪಾಕ್ ರಕ್ಷಣಾ ಸಚಿವ ಖುರ್ರಂ ದಸ್ತಗೀರ್ ಖಾನ್ ಹೇಳಿದ್ದಾರೆ.
ಇದರೊಂದಿಗೆ ಅಮೆರಿಕ ಜತೆಗಿನ ಪಾಕ್ ದ್ವಿಪಕ್ಷೀಯ ಮತ್ತು ಮಿಲಿಟರಿ ಸಂಬಂಧಗಳು ಹೊಸ ತಳಮಟ್ಟವನ್ನು ಕಂಡಂತಾಗಿದೆ.
”ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ನಮ್ಮಿಂದ ಬಿಲಿಯಗಟ್ಟಲೆ ಮಿಲಿಟರಿ ನೆರವು ಪಡೆದು ನಮ್ಮ ವಿರುದ್ಧವೇ ಡಬಲ್ ಗೇಮ್ ಆಡಿರುವ ಪಾಕಿಸ್ಥಾನಕ್ಕೆ ನಾವು ಎಲ್ಲ ರೀತಿಯ ಮಿಲಿಟರಿ ನೆರವನ್ನು ಸ್ಥಗಿತಗೊಳಿಸುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಚೆಗೆ ಹೇಳಿರುವುದಕ್ಕೆ ಕಡ್ಡಿ ಮುರಿದ ರೀತಿಯ ಪ್ರತಿಕ್ರಿಯೆ ಎಂಬಂತೆ ಪಾಕ್ ಈ ಹೇಳಿಕೆ ನೀಡಿದೆ.
ಪಾಕ್ ರಕ್ಷಣಾ ಸಚಿವ ಖುರ್ರಂ ದಸ್ತಗೀರ್ ಖಾನ್ “ಅಮೆರಿಕದೊಂದಿಗಿನ ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ಪಾಕಿಸ್ಥಾನ ಅಮಾನತುಗೊಳಿಸಿದೆ’ ಎಂದು ಹೇಳಿರುವುದನ್ನು ಪಾಕ್ ದೈನಿಕ ಡಾನ್ ವರದಿಮಾಡಿದೆ.
ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಪಾಕ್ ಜತೆ ಸಹಕರಿಸುವುದನ್ನು ಬಿಟ್ಟು ಅಮೆರಿಕ ಆರೋಪದ ಆಟದಲ್ಲಿ ತೊಡಗಿರುವುದು ದುರದೃಷ್ಟಕರ ಎಂದು ಡಾನ್ ಹೇಳಿದೆ.
“ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಮಾಡಿರುವ ತ್ಯಾಗಕ್ಕೆ ಬೆಲೆ ನಿಗದಿ ಮಾಡುವುದು ನಮಗೆ ಬೇಕಿಲ್ಲ; ನಮಗೆ ಬೇಕಿರುವುದು ನಾವು ಮಾಡಿರುವ ಕೆಲಸ ಮತ್ತು ತ್ಯಾಗಕ್ಕೆ ಮಾನ್ಯತೆ’ ಮಾತ್ರವೇ ಆಗಿದೆ ಎಂದು ಸಚಿವ ಖುರ್ರಂ ದಸ್ತಗೀರ್ ಹೇಳಿದ್ದಾರೆ.