Advertisement

ವಿದೇಶಿ ಆಟಗಾರನಲ್ಲಿ ಕೋವಿಡ್‌-19 ಸೋಂಕು ಪತ್ತೆ : ಪಾಕಿಸ್ಥಾನ ಸೂಪರ್‌ ಲೀಗ್‌ ಮುಂದೂಡಿಕೆ

10:03 AM Mar 18, 2020 | sudhir |

ಕರಾಚಿ: ವಿದೇಶಿ ಆಟಗಾರನೋರ್ವನಲ್ಲಿ ಅಪಾಯಕಾರಿ ಕೋವಿಡ್‌-19 ಸೋಂಕು ಪತ್ತೆಯಾದ ಕಾರಣ ಸದ್ಯ ಸಾಗುತ್ತಿರುವ ಪಾಕಿಸ್ಥಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಕೂಟವನ್ನು ಮುಂದೂಡಲು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನಿರ್ಧರಿಸಿದೆ.

Advertisement

ಪಿಎಸ್‌ಎಲ್‌ ನಾಕೌಟ್‌ ಹಂತಕ್ಕೆ ತಲುಪಿತ್ತು ಮತ್ತು ಮಂಗಳವಾರ ಮತ್ತು ಬುಧವಾರ ಲಾಹೋರ್‌ನಲ್ಲಿ ಸೆಮಿಫೈನಲ್ಸ್‌ ಮತ್ತು ಫೈನಲ್‌ ಪಂದ್ಯ ನಡೆಯಬೇಕಿತ್ತು. ಕೊರೊನಾದಿಂದಾಗಿ ಲೀಗ್‌ ಹಂತದ ಪಂದ್ಯಗಳನ್ನು ನಾಲ್ಕು ದಿನಗಳಿಗೆ ಕಡಿಮೆಗೊಳಿಸಲಾಗಿತ್ತು. ಆದರೆ ವಿದೇಶಿ ಆಟಗಾರನೋರ್ವನಲ್ಲಿ ಸೋಂಕು ಪತ್ತೆಯಾದ ಕಾರಣ ಇದೀಗ ಕೂಟವನ್ನು ಮುಂದೂಡಬೇಕಾಯಿತು.

ಪಾಕಿಸ್ಥಾನವನ್ನು ತೊರೆದ ಆಟಗಾರ ಸೋಂಕಿಗೆ ಒಳಗಾಗಿರುವ ವಿಷಯ ತಿಳಿಸಿದ್ದರಿಂದ ಯಾರೂ ಕೂಡ ಆತಂಕಕ್ಕೆ ಒಳಗಾಗದಿರಲು ಸುದೀರ್ಘ‌ ಚರ್ಚೆಯ ಬಳಿಕ ಕೂಟವನ್ನು ಮುಂದೂಡಲು ನಿರ್ಧರಿಸಲಾಯಿತು ಎಂದು ಪಿಸಿಬಿ ಸಿಇಒ ವಸೀಮ್‌ ಖಾನ್‌ ಹೇಳಿದ್ದಾರೆ.

ಅಲೆಕ್ಸ್‌ ಹೇಲ್ಸ್‌ ಅವರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಪಾಕಿಸ್ಥಾನದ ಮಾಜಿ ಟೆಸ್ಟ್‌ ನಾಯಕ ಮತ್ತು ವೀಕ್ಷಣೆಗಾರ ರಮೀಜ್‌ ರಾಜಾ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಎಸ್‌ಎಲ್‌ನ ಆಟಗಾರರು ಮತ್ತು ವೀಕ್ಷಣೆಗಾರರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ.

ಹೇಲ್ಸ್‌ ಅವರು ಇನ್ನೂ ಪರೀಕ್ಷೆಗೆ ಒಳಗಾಗಬೇಕಾಗಿದೆ. ಅವರಲ್ಲಿರುವ ಸೋಂಕು ಕೋವಿಡ್‌ಗೆ ಸಂಬಂಧಿಸಿದ ಬಗ್ಗೆ ಗೊತ್ತಿಲ್ಲ. ಆದರೆ ನಾವು ಬಹಳ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ರಾಜಾ ತಿಳಿಸಿದರು. ಇಂಗ್ಲೆಂಡಿಗೆ ತೆರಳಿದ ಬಳಿಕ ಹೇಲ್ಸ್‌ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಸರಕಾರದ ಸಲಹೆಯಂತೆ ತಪಾಸಣೆ ನಡೆಸಿ ನಿಗಾದಲ್ಲಿ ಇಡಲಾಗಿದೆ. ಅವರ ಚಿಕಿತ್ಸೆಯ ವರದಿ ಇನ್ನೂ ಬರಬೇಕಾಗಿದೆ. ಹಾಗಾಗಿ ಈ ಹಂತದಲ್ಲಿ ಏನೂ ಹೇಳಲು ಸಾಧ್ಯವಿಲ್ಲ .

Advertisement

ಸುರಕ್ಷತೆ ಮುಖ್ಯ
ಕೊರೊನದಿಂದಾಗಿ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದ್ದೇವೆ. ಕೂಟ ಮುಂದೂಡುವ ಮೊದಲು ಸರಕಾರ ಮತ್ತು ಆರೋಗ್ಯ ಇಲಾಖೆಯ ಸಲಹೆ ಪಡೆದಿದ್ದೇವೆ ಎಂದು ವಸೀಮ್‌ ಖಾನ್‌ ತಿಳಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಲೀಗ್‌ನಿಂದ ಯಾವುದೇ ಹಂತದಲ್ಲೂ ಹಿಂದೆ ಸರಿಯಬಹುದೆಂದು ಪಿಸಿಬಿ ವಿದೇಶಿ ಆಟಗಾರರಿಗೆ ಸೂಚಿಸಿತ್ತು. ಪಿಎಸ್‌ಎಲ್‌ನಲ್ಲಿ 34 ವಿದೇಶಿ ಆಟಗಾರರು ಆಡಿದ್ದರು ಮತ್ತು ಕಳೆದ ವಾರವೇ ಹೆಚ್ಚಿನ ಆಟಗಾರರು ತವರಿಗೆ ಮರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next