Advertisement

ಭಯೋತ್ಪಾದನೆಗೆ ಪಾಕ್‌ “ಮಾದಕ’ಅಸ್ತ್ರ! ತಿರುಗೇಟು ನೀಡಲು ಸೇನೆ ಬದ್ಧ

08:12 PM Feb 07, 2023 | Team Udayavani |

ಶ್ರೀನಗರ: ಜಟ್ಟಿ ಬಿದ್ದರೂ, ಮೀಸೆ ಮಣ್ಣಾಗಿಲ್ಲ ಎನ್ನುವಂತೆ ಕಾಶ್ಮೀರ ವಿಚಾರದಲ್ಲಿ ಪದೇ ಪದೆ ಕೈ ಸುಟ್ಟುಕೊಳ್ಳುತ್ತಿದ್ದರೂ, ಪಾಕಿಸ್ತಾನ ಬುದ್ಧಿ ಕಲಿಯುತ್ತಿಲ್ಲ. ಯುವಕರನ್ನು ಭಯೋತ್ಪಾದನೆಗೆ ಪ್ರೇರೇಪಿಸುವ ಪಿತೂರಿಗೆ ಭಾರತೀಯ ಸೇನೆ ಕಡಿವಾಣ ಹಾಕುತ್ತಿದ್ದಂತೆ, ಈಗ ಮಾದಕವಸ್ತುಗಳನ್ನು ಭಯೋತ್ಪಾದನೆಗೆ ಪಾಕಿಸ್ತಾನ ಅಸ್ತ್ರವಾಗಿಸಿಕೊಂಡಿದೆ ಎಂದು ಸೇನೆ ತಿಳಿಸಿದೆ.

Advertisement

ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್, ಲೆ.ಜ.ಉಪೇಂದ್ರ ದ್ವಿವೇದಿ ಈ ಕುರಿತು ಮಾಹಿತಿ ನೀಡಿದ್ದಾರೆ. ನೇರವಾಗಿ ಭಾರತವನ್ನು ಎದುರಿಸಲಾಗದೇ, ದೇಶದ ವಿರುದ್ಧ ಪಿತೂರಿ ರೂಪಿಸುತ್ತಿರುವ ಪಾಕ್‌ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಈಗ ಮಾದಕವಸ್ತುಗಳ ಆಮಿಶ ಒಡ್ಡುತ್ತಿದೆ. ಪಾಕಿಸ್ತಾನ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಹಾಗೂ ಮಾದಕವಸ್ತುಗಳನ್ನು ಸಾಗಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ. ಇದೇ ವೇಳೆ ಪಾಕ್‌ನ ಇಂಥ ಕುತಂತ್ರಗಳಿಗೆ ಬಗ್ಗುವುದಿಲ್ಲ. ಈಗಾಗಲೇ ಡ್ರೋನ್‌ ನಿಗ್ರಹ ತಂತ್ರಜ್ಞಾನದ ಮೂಲಕ ಪಾಕ್‌ ಪ್ರಯತ್ನಗಳಿಗೆ ಮಣ್ಣುಮುಕ್ಕಿಸಿದ್ದೇವೆ. ಮಂದೆ ಯಾವ ಸನ್ನಿವೇಶ ಬಂದರೂ ಹಿಮ್ಮೆಟ್ಟಿಸಲು ಸಿದ್ಧ ಎಂದು ಹೇಳಿದ್ದಾರೆ.

ಧ್ವಜ ಹಾರುತ್ತಿರುವುದು ಗಾಳಿಯಿಂದಲ್ಲ!:
ತ್ರಿವರ್ಣ ಧ್ವಜ ಹಾರುತ್ತಿರುವುದು ಗಾಳಿಯಿಂದಲ್ಲ, ದೇಶಕ್ಕಾಗಿ ಮಡಿದ ಸೈನಿಕನ ಉಸಿರಿನಿಂದ. ದೇಶದ ಜನರು ನಮ್ಮನ್ನು ನಂಬಿದ್ದಾರೆ. ಅವರ ರಕ್ಷಣೆಗಾಗಿ ನಾವು ಸದಾ ಸಿದ್ಧರಿರಬೇಕು ಎಂದಿದ್ದಾರೆ. ಅಲ್ಲದೇ, ದೇಶದ ಸಾರ್ವಭೌಮತೆಯನ್ನು ಕಾಯ್ದುಕೊಳ್ಳಲು ಸೇನೆಯ ಎಲ್ಲಾ ಶ್ರೇಣಿಯ ಸೈನಿಕರಿಗೆ ಅವರು ಸೂಚಿಸಿದ್ದಾರೆ.

ಚೀನ ಹಿಮ್ಮೆಟ್ಟಿಸಲು ಬದ್ಧ
ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಯಥಾಸ್ಥಿತಿ ಬದಲಾಯಿಸುವಲ್ಲಿ ಚೀನದ ಪ್ರಯತ್ನಕ್ಕೆ ಭಾರತ ಅತ್ಯಂತ ನಿರ್ಭೀತ ಮತ್ತು ಕ್ಷಿಪ್ರಗತಿಯಲ್ಲಿ ತಿರುಗೇಟು ನೀಡುತ್ತಿದೆ. ಭದ್ರತೆಗೆ ತೊಡಕಾಗುವ ಚೀನದ ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸಿ, ತಕ್ಕ ತಿರುಗೇಟು ನೀಡಲು ಭಾರತೀಯ ಸೇನೆ ಬದ್ಧವಾಗಿದೆ. ಗಸ್ತು ಚಟುವಟಿಕೆ, ತಾಂತ್ರಿಕ ಕಣ್ಗಾವಲಿನ ಮೂಲಕ ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಲೆ.ಜ.ದ್ವಿವೇದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next