ಇಸ್ಲಾಮಾಬಾದ್: ಸ್ಥಳೀಯ ಸಿಖ್ಖರು ಮತ್ತು ದಾವತ್ ಎ ಇಸ್ಲಾಮಿ (ಬರೇಲ್ವಿ) ಗುಂಪಿನ ಕಾರ್ಯಕರ್ತರ ನಡುವಿನ ಭೂ ವಿವಾದದಿಂದಾಗಿ ಪಾಕಿಸ್ತಾನ ಸರ್ಕಾರ ಐತಿಹಾಸಿಕ ಶಹೀದ್ ಭಾಯ್ ತರು ಸಿಂಗ್ ಗುರುದ್ವಾರವನ್ನು ಬಂದ್ ಮಾಡಿರುವುದಾಗಿ ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿರುವ ಸಿಖ್ಖರು ಗುರುದ್ವಾರ ಶಾಹಿದ್ ಗಂಜ್ ಸಿಂಗ್ ಸಿಂಘಾನಿಯ ಸಮೀಪವಿರುವ ಗುರುದ್ವಾರದಲ್ಲಿ ಶಾಹೀದ್ ಭಾಯ್ ತರು ಅವರ ಹುತಾತ್ಮ ದಿನಾಚರಣೆಗೆ ಮುಂದಾದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಶೃಂಗೇರಿ ಆ್ಯಸಿಡ್ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ
ಮೂಲಗಳ ಪ್ರಕಾರ, ಶುಕ್ರವಾರ ಶಾಹಿದ್ ಗಂಜ್ ಸಿಂಗ್ ಸಿಂಘಾನಿಯಾ ಗುರುದ್ವಾರದಲ್ಲಿ ಅಖಂಡ್ ಪಥ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭಾಯಿ ತರು ಸಿಂಗ್ ಹುತಾತ್ಮ ದಿನಾಚರಣೆಗಾಗಿ ಸ್ಥಳೀಯ ಸಿಖ್ಖ ಸಮುದಾಯ ವಾರ್ಷಿಕೋತ್ಸವಕ್ಕಾಗಿ ಸೇರುವುದು ವಾಡಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಆದರೆ ಈ ಗುರುದ್ವಾರವು ಪೀರ್ ಕಾಕು ಷಾ ಅವರ ಸಮಾಧಿ ಸ್ಥಳದಲ್ಲಿದೆ ಎಂಬುದು ದಾವತ್ ಎ ಇಸ್ಲಾಮಿ ಅನುಯಾಯಿಗಳ ಆರೋಪವಾಗಿದೆ. ಇದರಿಂದಾಗಿ ಈ ಆವರಣದಲ್ಲಿರುವ ಗುರುದ್ವಾರದಲ್ಲಿ ತರು ಸಿಂಗ್ ಹುತಾತ್ಮ ದಿನಾಚರಣೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ದಾವತ್ ಎ ಇಸ್ಲಾಮಿ ಪಟ್ಟುಹಿಡಿದಿರುವುದಾಗಿ ವರದಿ ಹೇಳಿದೆ.
ಈ ಪ್ರದೇಶದಲ್ಲಿ ಉದ್ನಿಗ್ನ ಪರಿಸ್ಥಿತಿ ಹೆಚ್ಚಾಗುತ್ತಿದ್ದಂತೆಯೇ ಪಾಕಿಸ್ತಾನ ಸರ್ಕಾರ ಮಧ್ಯಪ್ರವೇಶಿಸಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ ಗುರುದ್ವಾರ ಮತ್ತು ಮಜಾರ್ ಇರುವ ಆವರಣ ಬಂದ್ ಮಾಡಿರುವುದಾಗಿ ವರದಿ ತಿಳಿಸಿದೆ.