ವಾಷಿಂಗ್ಟನ್: ಆರು ಇಸ್ಲಾಮಿಕ್ ರಾಷ್ಟ್ರಗಳ ಜನರಿಗೆ ಅಮೆರಿಕ ಪ್ರವೇಶಿಸಲು ನಿರ್ಬಂಧ ಹೇರಿದ್ದ ಬೆನ್ನಲ್ಲೇ ಇತರೆ ಮುಸ್ಲಿಮ್ ದೇಶಗಳಿಗೂ ಆತಂಕ ಶುರುವಾಗಿದೆ. ಮುಂದೆ ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾ ದೇಶಗಳ ಪ್ರಜೆಗಳಿಗೂ ಅಮೆರಿಕ ವೀಸಾ ಸಿಗುವ ಸಾಧ್ಯತೆ ಕ್ಷೀಣವಾಗಿದೆ.
ಎಬಿಸಿ ಸಂದರ್ಶನದಲ್ಲಿ ಈ ಬಗ್ಗೆ ಮುನ್ಸೂಚನೆ ನೀಡಿರುವ ಟ್ರಂಪ್, “ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಸೌದಿ ಅರೇಬಿಯಾ ಮಂದಿಗೆ ಯಾಕೆ ಅಮೆರಿಕದೊಳಗೆ ಬಿಟ್ಟುಕೊಳ್ಳಬೇಕು? ಅಮೆರಿಕಕ್ಕೆ ಇವರಿಂದ ಆತಂಕ ಇದೆ ಎಂದಾದರೆ ಇಲ್ಲಿನ ಒಂದಿಂಚು ಜಾಗದಲ್ಲೂ ಅವರಿರಲು ಯೋಗ್ಯರಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.
ಟ್ರಂಪ್ ಅಧಿಕಾರ ಸ್ವೀಕರಿಸಿದ ಈ ಐದಾರು ದಿನಗಳಲ್ಲಿ ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ಸಮರ ನಿರಂತರ ಮುಂದುವರಿದಿದೆ. ದೇಶದಲ್ಲಿ ಇಸ್ಲಾಮಿಕ್ ಉಗ್ರವಾದವನ್ನು ಮಟ್ಟಹಾಕಲು ಟ್ರಂಪ್ ಶನಿವಾರ ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ. “ವಿದೇಶಿ ಉಗ್ರರಿಂದ ಅಮೆರಿಕ ರಕ್ಷಣೆ’ ಎಂಬ ಆದೇಶ ಇದಾಗಿದ್ದು, ಅಮೆರಿಕಕ್ಕೆ ಆಗಮಿಸುವ ಪ್ರಮುಖ ಇಸ್ಲಾಮಿಕ್ ದೇಶವಾಸಿಗಳ ವಿರುದ್ಧ ನಿರ್ಬಂಧವೂ ಇದಾಗಿದೆ. “2001, ಸೆ.11ರ ದಾಳಿಯ ನಂತರ ಅಮೆರಿಕದಲ್ಲಿ ನಡೆದ ಹಲವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಇಸ್ಲಾಮಿಕ್ ದೇಶದರೇ ಹೆಚ್ಚು ಭಾಗಿಯಾಗಿದ್ದಾರೆ. ಇಲ್ಲಿಗೆ ಪ್ರವಾಸಿಗರಾಗಿ, ವಿದ್ಯಾರ್ಥಿಯಾಗಿ, ಉದ್ಯೋಗ ವೀಸಾ ಪಡೆದು ಅಥವಾ ನಿರಾಶ್ರಿತ ಶಿಬಿರದ ಯೋಜನೆಯ ಲಾಭ ಪಡೆದು ಆಗಮಿಸುವವರು ಈ ನೆಲಕ್ಕೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ದೂರಿದ್ದಾರೆ.
ವಲಸೆ ವಿರೋಧಿ ನೀತಿಗೆ ಜುಕರ್‌ಬರ್ಗ್ ಟೀಕೆ
ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ನೂತನ ಅಮೆರಿಕ ಅಧ್ಯಕ್ಷರು ವಿಧಿಸಿರುವ ನಿರ್ಬಂಧಕ್ಕೆ ದೇಶದಲ್ಲಿ ವಿರೋಧದ ಕೂಗುಗಳೂ ಕೇಳಿಬಂದಿವೆ. ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, “ನಾವು ಈ ದೇಶವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಿರುವುದು ನಿಜ. ಹಾಗಂತ ಎಲ್ಲರನ್ನೂ ಅನುಮಾನಿಸುವುದರಲ್ಲಿ ಅರ್ಥವಿಲ್ಲ. ಯಾರು ಅಪರಾಧದ ಹಿನ್ನೆಲೆಯಲ್ಲಿದ್ದಾರೋ ಅಂಥವರ ಮೇಲಷ್ಟೇ ಕ್ರಮ ತೆಗೆದುಕೊಳ್ಳುವುದು ಉತ್ತಮ’ ಎಂದು ಟ್ರಂಪ್‌ಗೆ ಸಲಹೆ ನೀಡಿದ್ದಾರೆ.
“ನಿರಾಶ್ರಿತರಿಗೂ ಜಾಗ ಕೊಟ್ಟರೆ ತಪ್ಪೇನಿಲ್ಲ. ಯಾರು ಸಹಾಯ ಬಯಸಿ ಬರುತ್ತಾರೋ ಅಂಥವರ ಮೇಲೆ ಅನುಕಂಪ ಇಟ್ಟುಕೊಳ್ಳಬೇಕು. ಅಮೆರಿಕ ಏನೂಂತ ಗೊತ್ತಾಗುವುದೇ ಈ ವಿಚಾರದಲ್ಲಿ. ನಿರಾಶ್ರಿತರನ್ನು ಒಂದು ದಶಕದ ಹಿಂದೆಯೇ ನಿರ್ಬಂಧಿಸಿದ್ದರೆ ನನ್ನ ಪತ್ನಿ ಪ್ರಿಸಿಲ್ಲಾ ಅಮೆರಿಕ ಪ್ರವೇಶಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಇದು ನನ್ನ ಕುಟುಂಬದ ವಿಚಾರ ಅಂತ ನಾನು ಪ್ರಸ್ತಾಪಿಸುತ್ತಿಲ್ಲ. ಕೆಲವು ವರ್ಷಗಳ ಹಿಂದೆಯೇ ನಾನು ಇದನ್ನು ಆಲೋಚಿಸಿದ್ದೆ. ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ನನ್ನ ಅನೇಕ ಸಹಪಾಠಿಗಳಿಗೆ ಸೂಕ್ತ ದಾಖಲೆಗಳೇ ಇರಲಿಲ್ಲ. ಆದರೆ, ಅವರೆಲ್ಲ ಮುಂದೆ ದೇಶ ಕಟ್ಟುವವರೇ. ಅಮೆರಿಕ ಇಂದು ಬೃಹತ್ ಆಗಿ ಬೆಳೆದಿದ್ದರೆ ಅದಕ್ಕೆ ಹೊರಗಿನವರೇ ಕಾರಣ. ರಕ್ಷಣೆ ನೆಪದಲ್ಲಿ ಯಾರಿಗೂ ಭಯ ಹುಟ್ಟಿಸಬಾರದು’ ಎಂದು ಹೇಳಿದ್ದಾರೆ.