ಇಸ್ಲಾಮಾಬಾದ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ಥಾನವನ್ನು “ಅಂತಾರಾಷ್ಟ್ರೀಯ ಭಯೋತ್ಪಾದನೆಯಲ್ಲಿ ಪರಿಣಿತರು” ಎಂದು ಹೇಳಿರುವುದನ್ನು “ಅತ್ಯಂತ ಬೇಜವಾಬ್ದಾರಿ ಮತ್ತು ಅನಪೇಕ್ಷಿತ” ಎಂದು ಪಾಕಿಸ್ಥಾನದ ವಿದೇಶಾಂಗ ಕಚೇರಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದೆ.
ವಡೋದರಾದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ನೀಡಿದ ಅತ್ಯಂತ ಬೇಜವಾಬ್ದಾರಿ ಮತ್ತು ಅನಪೇಕ್ಷಿತ ಟೀಕೆಗಳನ್ನು ಪಾಕಿಸ್ಥಾನ ಸ್ಪಷ್ಟವಾಗಿ ತಿರಸ್ಕರಿಸುತ್ತದೆ. ಅವರ ಆಧಾರರಹಿತ ಹೇಳಿಕೆಗಳು ಅಂತಾರಾಷ್ಟ್ರೀಯ ಸಮುದಾಯವನ್ನು ದಾರಿತಪ್ಪಿಸಲು ಭಯೋತ್ಪಾದನೆಗೆ ಸಂಬಂಧಿಸಿದಂತೆ ಸತ್ಯಗಳನ್ನು ರೂಪಿಸುವ ಭಾರತೀಯ ನಾಯಕರ ಗೀಳಿನ ಮತ್ತೊಂದು ಅಭಿವ್ಯಕ್ತಿಯಾಗಿದೆ” ಎಂದು ಪಾಕ್ ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಅಲ್-ಶಬಾಬ್ ಉನ್ನತ ಉಗ್ರ ನಾಯಕ ಅಬ್ದುಲ್ಲಾಹಿ ನಾದಿರ್ ಹತ್ಯೆ
ಗುಜರಾತ್‌ನ ವಡೋದರಾದಲ್ಲಿ ಶನಿವಾರ “ರೈಸಿಂಗ್ ಇಂಡಿಯಾ ಅಂಡ್ ದಿ ವರ್ಲ್ಡ್: ಫಾರಿನ್ ಪಾಲಿಸಿ ಇನ್ ಮೋದಿ ಎರಾ” ದಲ್ಲಿ ಮಾತನಾಡಿದ ಜೈಶಂಕರ್, ಭಾರತವನ್ನು ”ಐಟಿ ತಜ್ಞ ”ಎಂದು ಪರಿಗಣಿಸಿದರೆ, ಪಾಕಿಸ್ಥಾನ ವನ್ನು ಅಂತಾರಾಷ್ಟ್ರೀಯ “ಭಯೋತ್ಪಾದನೆಯ ತಜ್ಞ” ಎಂದು ಕರೆದಿದ್ದರು.
”ಪಾಕಿಸ್ಥಾನದ ರೀತಿಯಲ್ಲಿ ಭಯೋತ್ಪಾದನೆಯನ್ನು ಯಾವುದೇ ದೇಶ ನಡೆಸುವುದಿಲ್ಲ. ಭಾರತದ ವಿರುದ್ಧ ಪಾಕಿಸ್ಥಾನ ಇಷ್ಟು ವರ್ಷಗಳ ಕಾಲ ಏನು ಮಾಡಿದೆ ಎಂಬುದನ್ನು ನೀವು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ನೋಡಬಹುದು. 26/11 ಮುಂಬೈ ದಾಳಿಯ ನಂತರ, ಈ ರೀತಿಯ ನಡವಳಿಕೆ ಮತ್ತು ಕ್ರಮವು ಸ್ವೀಕಾರಾರ್ಹವಲ್ಲ ಮತ್ತು ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ನಮಗೆ ನಾವೇ ಸ್ಪಷ್ಟಪಡಿಸಿಕೊಳ್ಳುವುದು ಬಹಳ ಮುಖ್ಯ, ”ಎಂದು ಜೈಶಂಕರ್ ಭಾಷಣದ ನಂತರ ಪ್ರೇಕ್ಷಕರೊಂದಿಗೆ ನಡೆದ ಸಂವಾದದ ಸಮಯದಲ್ಲಿ ಹೇಳಿದ್ದರು.