ನವದೆಹಲಿ: ಇಡೀ ಜಗತ್ತು ಕೋವಿಡ್ 19 ವೈರಸ್ ನಿಂದ ತತ್ತರಿಸುತ್ತಿದ್ದರೆ, ಇತ್ತ ಪಾಕಿಸ್ತಾನ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಪಾಕ್ ಸೇನೆ ಮತ್ತೆ ತಾಲಿಬಾನ್ ಉಗ್ರರ ಶಿಬಿರಗಳನ್ನು ಸಕ್ರಿಯಗೊಳಿಸುವ ಮೂಲಕ ಕಾಶ್ಮೀರದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಬಯಲಾಗಿದೆ ಎಂದು ವರದಿ ತಿಳಿಸಿದೆ.
ಅಫ್ಘಾನಿಸ್ತಾನ ಭದ್ರತಾ ಪಡೆಗಳು ಸೆರೆ ಹಿಡಿದ ಜೈಶ್ ಎ ಮೊಹಮ್ಮದ್ ಉಗ್ರರು ಪಾಕಿಸ್ತಾನದ ಸಂಚನ್ನು ಬಯಲು ಮಾಡಿರುವುದಾಗಿ ವರದಿ ವಿವರಿಸಿದೆ. ಅಲ್ಲದೇ ಅಫ್ಘಾನಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲು ಸಿದ್ದತೆ ನಡೆಸಿರುವುದಾಗಿ ತಿಳಿಸಿದೆ.
ಅಫ್ಘಾನ್ ಪಡೆಗಳಿಗೆ ಸೆರೆ ಸಿಕ್ಕಿರುವ ಉಗ್ರರಿಗೆ ಪಾಕಿಸ್ತಾನ ನಾಲ್ಕು ತಿಂಗಳ ಕಾಲ ಶಸ್ತ್ರಾಸ್ತ್ರ ತರಬೇತಿ ನೀಡಿ ದಾಳಿ ನಡೆಸುವಂತೆ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ನಡೆಸಲು ತಾಲಿಬಾನ್ ಶಿಬಿರಗಳನ್ನು ಬಳಸಿಕೊಳ್ಳುತ್ತಿದೆ ಎಂಬುದಾಗಿ ಭಾರತದ ಭದ್ರತಾ ಪಡೆಗಳು ಎಚ್ಚರಿಕೆಯ ಸಂದೇಶ ನೀಡಿತ್ತು. ಇದೀಗ ಜೈಶ್ ಉಗ್ರರು ತಪ್ಪೊಪ್ಪಿಕೊಳ್ಳುವ ಮೂಲಕ ಪಾಕಿಸ್ತಾನ ಮುಖವಾಡ ಮತ್ತೊಮ್ಮೆ ಬಯಲಾಗಿದೆ ಎಂದು ವರದಿ ವಿಶ್ಲೇಷಿಸಿದೆ.
ಅಫ್ಘಾನಿಸ್ತಾನದ ನಂಗಾರ್ ಹರ್ ಪ್ರಾಂತ್ಯದಲ್ಲಿ ಉಗ್ರರ ವಿರುದ್ಧ ನಡೆಸಿದ ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 15 ಉಗ್ರರನ್ನು ಹತ್ಯೆಗೈದಿದ್ದು, ತಾಲಿಬಾನ್ ಶಿಬಿರಗಳಲ್ಲಿ ಇದ್ದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಉಗ್ರರಲ್ಲಿ ಐವರು ಮಾತ್ರ ತಾಲಿಬಾನಿಗಳಿದ್ದು, ಉಳಿದವರು ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸದಸ್ಯರು ಎಂದು ಭದ್ರತಾ ಪಡೆಗಳು ಪತ್ತೆಹಚ್ಚಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನದ ಐಎಸ್ ಐ ಕೂಡಾ ತಾಲಿಬಾನ್ ಉಗ್ರರನ್ನು ಕಾಶ್ಮೀರದೊಳಕ್ಕೆ ಕಳುಹಿಸಿಲು ಯತ್ನಿಸುತ್ತಿದೆ. ತಾಲಿಬಾನ್ ನಲ್ಲಿರುವ ಬಹುತೇಕ ಉಗ್ರರು ನಿವೃತ್ತ ಹಿರಿಯ ಯೋಧರು. ಅಲ್ಲದೇ ಗಡಿ ನಿಯಂತ್ರಣ ರೇಖೆಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಕೂಡಾ ಠಿಕಾಣಿ ಹೂಡಿದ್ದಾರೆ. ಕೆಲವರನ್ನು ತಾಲಿಬಾನ್ ಶಿಬಿರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಭಾರತೀಯ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.