Advertisement

ಪಾಕ್‌ ಕೋವಿಡ್ ಅಸ್ತ್ರ ತಕ್ಕ ಪಾಠ ಕಲಿಸಬೇಕು

07:05 AM Jul 08, 2020 | mahesh |

ದಕ್ಷಿಣ ಕಾಶ್ಮೀರದ ಕುಲ್ಗಾಂನಲ್ಲಿ ಕೆಲ ದಿನಗಳ ಹಿಂದೆ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಮೃತಪಟ್ಟ ಇಬ್ಬರು ಉಗ್ರರು ಕೋವಿಡ್‌-19 ಪೀಡಿತರಾಗಿದ್ದರು ಎನ್ನುವುದು ಪತ್ತೆಯಾಗಿದೆ. ಪಾಕಿಸ್ಥಾನ ಸರಕಾರ ಮತ್ತು ಸೇನೆಯು ಕಾಶ್ಮೀರದಲ್ಲಿ ಉಗ್ರ ಕ್ರಿಮಿಗಳ ಜತೆಗೆ, ವೈರಸ್‌ ಅನ್ನೂ ನುಸುಳಿಸಲು ಪ್ರಯತ್ನಿಸುತ್ತಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಕಳೆದ ಕೆಲವು ಸಮಯದಿಂದ ಕಾಶ್ಮೀರ ಕಣಿವೆಯಲ್ಲಿ, ಅದರಲ್ಲೂ ಅಲ್ಲಿನ ಗ್ರಾಮೀಣ ಭಾಗಗಳಲ್ಲಿ ಉಗ್ರರ ಒಳನುಸುಳುವಿಕೆ  ಪ್ರಯತ್ನಗಳು ನಿರಂತರವಾಗಿ ಸಾಗಿವೆ.

Advertisement

ಆದಾಗ್ಯೂ ಪಾಕಿಸ್ಥಾನವು ಕೋವಿಡ್ ಪೀಡಿತ ಉಗ್ರರನ್ನು ನುಸುಳಿಸಲು ಪ್ರಯತ್ನಿಸುತ್ತಿದೆ ಎಂದು ನಮ್ಮ ಗುಪ್ತಚರ ಇಲಾಖೆಯು ಎಪ್ರಿಲ್‌ ತಿಂಗಳ ಆರಂಭದಲ್ಲೇ ಎಚ್ಚರಿಸಿತ್ತು. ಈ ಕಾರಣದಿಂದಾಗಿಯೇ, ನಮ್ಮ ಭದ್ರತಾಪಡೆಗಳು ಗಡಿಯಲ್ಲಿ ತೀವ್ರ ಗಮನವಿಟ್ಟಿವೆ. ಆದರೂ ಕೆಲವು ಮಾರ್ಗಗಳ ಮೂಲಕ ಆತಂಕವಾದಿಗಳು
ಭಾರತಕ್ಕೆ ನುಸುಳಲು ಸಫ‌ಲವಾಗಿಬಿಡುತ್ತಾರೆ. ಇಂಥವರನ್ನೆಲ್ಲ ಪತ್ತೆಹಚ್ಚಿ ಸದೆಬಡಿಯುವಲ್ಲಿ ಸೇನೆಯೇನೂ ತಡಮಾಡುವುದಿಲ್ಲ. ಆದರೆ ಭಾರತ ಮತ್ತು ಪಾಕಿಸ್ಥಾನದ ನಡುವಿನ ಬೃಹತ್‌ ಗಡಿ ಭಾಗದಲ್ಲಿ ಅನೇಕ ಪ್ರದೇಶಗಳು ದಟ್ಟ ಅರಣ್ಯಗಳಿಂದ ಅಥವಾ ಪರ್ವತಗಳಿಂದ ಆವೃತ್ತವಾಗಿವೆ. ಇದರ ಲಾಭ ಪಡೆಯುವ ಉಗ್ರರು ಒಳನುಸುಳಿಬಿಡುತ್ತಾರೆ.

ಗಮನಾರ್ಹ ಸಂಗತಿಯೆಂದರೆ, ಜಮ್ಮು-ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದಾಗಿನಿಂದ ಕಣಿವೆಯಲ್ಲಿ ಭದ್ರತಾಪಡೆಗಳು ಅತ್ಯಂತ ಸಕ್ಷಮವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಪ್ರತ್ಯೇಕತಾವಾದಿಗಳ ಕುತಂತ್ರಗಳಿಗೆಲ್ಲ ಕತ್ತರಿ ಹಾಕಿರುವುದರಿಂದಾಗಿ ಕಾಶ್ಮೀರದಲ್ಲಿ ಉಗ್ರರ ಉಪಟಳ ಕಡಿಮೆಯಾಗಲಾರಂಭಿಸಿದೆ. ಇದೆಲ್ಲದರ ನಡುವೆ, ಅತ್ತ ಪಾಕಿಸ್ಥಾನದ ಮನಃಸ್ಥಿತಿ ಎಂಥ ದುಃಸ್ಥಿತಿಗೆ ತಲುಪಿದೆ ಎಂದು ಅಚ್ಚರಿಯಾಗುತ್ತದೆ. ಖುದ್ದು ಕೊರೊನಾದಿಂದಾಗಿ ಪರದಾಡುತ್ತಿದ್ದರೂ ಆ ರಾಷ್ಟ್ರ , ಭಾರತ ವಿರೋಧಿ ಕುಕೃತ್ಯಗಳನ್ನು ಮುಂದುವರಿಸಬೇಕೆಂಬ ಮನೋಧೋರಣೆಯಲ್ಲೇ ಬದುಕುತ್ತಿದೆ!

ಪಾಕ್‌ ಸೇನೆಯು ಅಪಾರ ಪ್ರಮಾಣದಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಹಾಗೂ ಲಷ್ಕರ್‌ ಉಗ್ರರನ್ನು ಭಾರತದೊಳಕ್ಕೆ ನುಸುಳಿಸಲು ಪ್ರಯತ್ನಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ಈ ಹಿಂದೆಯೇ ಭಾರತೀಯ ಸೇನೆಗೆ ತಲುಪಿದೆ. ಅದರಲ್ಲೂ ನೌಶೇರಾ ಮತ್ತು ಛಂಬದ ದುರ್ಗಮ ಪ್ರದೇಶಗಳಲ್ಲಿ ಉಗ್ರರ ನೆಲೆಗಳಿವೆ ಎಂಬ ಸುಳಿವು ಭಾರತಕ್ಕೆ ಸಿಕ್ಕಿದೆ. ಈ ಉಗ್ರರೆಲ್ಲ ಗುಲ್ಮಾರ್ಗ್‌ ಮೂಲಕ ಒಳನುಸುಳಲು ಪ್ರಯತ್ನಿಸಬಹುದು ಎಂಬ ಕಾರಣಕ್ಕಾಗಿ ಆ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಉಗ್ರರು ಹಳ್ಳಿಗಳೊಳಗೆ ನುಗ್ಗಿ ಅಲ್ಲಿ ಕೋವಿಡ್ ಹರಡುವ ಅಪಾಯವಿದ್ದು, ಈ ಪ್ರಯತ್ನಗಳನ್ನು ಮೊಳಕೆಯಲ್ಲೇ ಚಿವುಟಿಹಾಕುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next