ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಕೋವಿಡ್ 19 ಲಸಿಕೆ ತೆಗೆದುಕೊಂಡ ಎರಡು ದಿನದ ನಂತರ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೇರಳ ಚುನಾವಣಾ ಕಣ; ಅದೃಷ್ಟ ಪರೀಕ್ಷೆಗೆ ಚುನಾವಣಾ ಅಖಾಡಕ್ಕಿಳಿದ ಮಹಿಳಾ ಅಭ್ಯರ್ಥಿಗಳು
ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನಿವಾಸದಲ್ಲಿ ಸ್ವಯಂ ಐಸೊಲೇಷನ್ ಗೆ ಒಳಗಾಗಿರುವುದಾಗಿ ಸಚಿವ ಫೈಸಲ್ ಸುಲ್ತಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇಮ್ರಾನ್ ಖಾನ್ ಶುಕ್ರವಾರ ಮೊದಲ ಲಸಿಕೆ ಪಡೆದಿದ್ದು, ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಪೂರ್ಣಪ್ರಮಾಣದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಮೊದಲ ಹಂತದ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭಗೊಂಡಿದ್ದು, ಇಮ್ರಾನ್ ಖಾನ್ (67) ಕೂಡಾ ರೋಗಪ್ರತಿನಿರೋಧಕ ಹೆಚ್ಚಿಸಿಕೊಳ್ಳಲು ಲಸಿಕೆ ಪಡೆದಿರುವುದಾಗಿ ವರದಿ ವಿವರಿಸಿದೆ.
ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಾದ ಪ್ರದೇಶಗಳಲ್ಲಿ ಪಾಕಿಸ್ತಾನ ಸರ್ಕಾರ ಭಾಗಶಃ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ. ಲಾಕ್ ಡೌನ್ ಜಾರಿಯಾಗಿರುವ ಪ್ರದೇಶಗಳಲ್ಲಿನ ಎಲ್ಲಾ ಮಾರುಕಟ್ಟೆ, ಶಾಪಿಂಗ್ ಮಾಲ್, ಕಚೇರಿ ಮತ್ತು ರೆಸ್ಟೋರೆಂಟ್ ಗಳು ಬಂದ್ ಆಗಿರುವುದಾಗಿ ವರದಿ ಹೇಳಿದೆ.