Advertisement

ಪಾಕ್‌ನಲ್ಲಿ ಮತ್ತೆ ಅರಾಜಕತೆ: ಇಮ್ರಾನ್‌ ಕಾಲ ಮುಗಿಯಿತೇ?

01:03 PM Nov 18, 2021 | Team Udayavani |
ಪಾಕಿಸ್ಥಾನ ಸೇನೆ ಇಮ್ರಾನ್‌ ಖಾನ್‌ ಪದಚ್ಯುತಿಗೆ ನೇರವಾಗಿ ಪ್ರಯತ್ನಿಸದೇ, ಹಿಂಬಾಗಿಲ ಮೂಲಕ ಎಲ್ಲ ರೀತಿಯ ಸಂಚು ರೂಪಿಸುತ್ತಿದೆ. ಟೆಹ್ರಿಕ್‌ ಎ ತಾಲಿಬಾನ್‌ ಉಗ್ರ ಸಂಘಟನೆಯ ಸದಸ್ಯರನ್ನು ಜೈಲಿನಿಂದ ಬಿಡುಗಡೆ ಮಾಡುತ್ತಿದ್ದ ಹಾಗೆ, ಇತ್ತ ಇಮ್ರಾನ್‌ ಖಾನ್‌ ಸರಕಾರಕ್ಕೆ ನೀಡಲಾಗಿದ್ದ ಬೆಂಬಲವನ್ನು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ ಮತ್ತು ಪಾಕಿಸ್ಥಾನ್‌ ಮುಸ್ಲಿಂ ಲೀಗ್‌ ಪಕ್ಷಗಳು ವಾಪಸ್‌ ಪಡೆದಿವೆ. ನ.20ರಂದು ಐಎಸ್‌ಐ ಮುಖ್ಯಸ್ಥರಾಗಿ ನದೀಮ್‌ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ, ವಿಪಕ್ಷಗಳು ಇಮ್ರಾನ್‌ ಸರಕಾರದ ವಿರುದ್ಧ ಅವಿಶ್ವಾಸ ಮತ ಮಂಡನೆ ಮಾಡಲಿವೆ ಎಂದು ಹೇಳಲಾಗುತ್ತಿದೆ...
Now pay only for what you want!
This is Premium Content
Click to unlock
Pay with

ಪಾಕಿಸ್ಥಾನದಲ್ಲಿ ಮತ್ತೊಮ್ಮೆ ಅರಾಜಕತೆ ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ತೋರುತ್ತಿವೆ. ಪಾಕಿಸ್ಥಾನ ಸೇನೆ ಮತ್ತು ಪ್ರಧಾನಿ ಇಮ್ರಾನ್‌ ಖಾನ್‌ ನಡುವಿನ ವಿರಸ ತಾರಕಕ್ಕೇರಿದ್ದು, ಸದ್ಯದಲ್ಲೇ ದೇಶಭ್ರಷ್ಟರಾಗಿರುವ ಮಾಜಿ ಪ್ರಧಾನಿ ನವಾಜ್‌ ಶರೀಫ್ ವಾಪಸ್‌ ಬರಲಿದ್ದಾರೆ. ಇವರೇ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಮಾತುಗಳು ದಟ್ಟವಾಗಿವೆ. ಐಎಸ್‌ಐ ಮುಖ್ಯಸ್ಥರ ನೇಮಕ ವಿಚಾರದಲ್ಲಿ ಸೇನೆ ಮತ್ತು ಇಮ್ರಾನ್‌ ನಡುವಿನ ಮುನಿಸು ಉಲ್ಬಣವಾಗಿದ್ದು, ಅವರ ಪದಚ್ಯುತಿಗೆ ಇದೇ ಕಾರಣವಾಗಬಹುದು ಎಂದೇ ಹೇಳಲಾಗುತ್ತಿದೆ. ಇದೇ 20ನೇ ತಾರೀಖು, ಶನಿವಾರ ಇಮ್ರಾನ್‌ ಖಾನ್‌ ಅವರ ಆಡಳಿತಾವಧಿಯ ಕಡೇ ದಿನ ಎಂದು ಮೂಲಗಳು ಹೇಳುತ್ತಿವೆ.

Advertisement

ಕ್ರಿಕೆಟ್‌ನಿಂದ ಪ್ರಧಾನಿ ಪಟ್ಟದವರೆಗೆ
ಇಮ್ರಾನ್‌ ಖಾನ್‌ ಮೂಲತಃ ರಾಜಕೀಯದವರಲ್ಲ. ಕ್ರಿಕೆಟ್‌ನ ಜನಪ್ರಿಯತೆಯನ್ನು ಬಳಸಿಕೊಂಡು ರಾಜಕೀಯಕ್ಕೆ ಬಂದವರು. ಒಂದು ಕಡೆ ಸೇನೆ ಮತ್ತೂಂದು ಕಡೆ ಪಾಕಿಸ್ಥಾನದ ಭ್ರಷ್ಟಾಚಾರ ಸಹಿತ ರಾಜಕೀಯ. ಈ ಎರಡರಿಂದ ನೊಂದಿದ್ದ ಪಾಕಿಸ್ಥಾನ ಜನತೆ, ಇಮ್ರಾನ್‌ ಅವರ ಪಾಕಿಸ್ಥಾನ್‌ ತೆಹ್ರಿಕ್‌ ಇ ಇನ್ಸಾಫ್ ಪಕ್ಷಕ್ಕೆ ಹೆಚ್ಚಿನ ಒಲವು ತೋರಿತು. ಹೀಗಾಗಿ ಹೆಚ್ಚಿನ ಸೀಟು ಪಡೆದ ಇಮ್ರಾನ್‌ ಪಕ್ಷ, 2018ರ ಆಗಸ್ಟ್‌ 18ರಂದು ಆಡಳಿತಕ್ಕೇರಿತು. ತಮ್ಮನ್ನು ತಾವು ನ್ಯಾಶನಲಿಸ್ಟ್‌ ಮತ್ತು ಪಾಪ್ಯುಲಿಸ್ಟ್‌ ಎಂದು ಕರೆದುಕೊಂಡ ಇಮ್ರಾನ್‌, 1971ರಲ್ಲಿ ಪಾಕಿಸ್ಥಾನ, ಪೂರ್ವ ಪಾಕಿಸ್ಥಾನ (ಈಗಿನ ಬಾಂಗ್ಲಾ)ದಲ್ಲಿ ನಡೆಸಿದ್ದ ನರಮೇಧವನ್ನು ಖಂಡಿಸಿದ್ದರು. ಬಳಿಕ ತಾವೊಬ್ಬ ಸುಧಾರಣಾವಾದಿ ಎಂದು ಹೇಳಿಕೊಂಡಿದ್ದ ಇಮ್ರಾನ್‌, ಉಗ್ರರ ಆಟೋಟೋಪವನ್ನು ಖಂಡಿಸಿದ್ದರು. 1996ರಲ್ಲಿ ರಾಜಕೀಯ ಪ್ರವೇಶಿಸಿದ ಇಮ್ರಾನ್‌, ಬಹಳಷ್ಟು ವರ್ಷಗಳ ವರೆಗೆ ಯಶಸ್ಸು ಸಾಧಿಸಲಿಲ್ಲ. ಆದರೆ ನವಾಜ್‌ ಶರೀಫ್ ಸೇರಿತಂತೆ ಅಲ್ಲಿನ ಆಡಳಿತ ಪಕ್ಷದಲ್ಲಿದ್ದ ರಾಜಕೀಯ ನಾಯಕರ ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನ ಪರ್ಯಾಯವೊಂದನ್ನು ಹುಡುಕುತ್ತಿದ್ದರು. 2013ರಲ್ಲಿ ಇಮ್ರಾನ್‌ ಪಕ್ಷ 30 ಸಂಸತ್‌ ಸ್ಥಾನಗಳನ್ನು ಗೆದ್ದಿತ್ತು. ಅಲ್ಲದೇ, ಮೂರನೇ ಅತೀ ದೊಡ್ಡ ಪಕ್ಷವಾಗಿತ್ತು. 2018ರ ಚುನಾವಣೆಯಲ್ಲಿ ಇಮ್ರಾನ್‌ ಪಕ್ಷ 270 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇಮ್ರಾನ್‌ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಲ್ಲದರಲ್ಲೂ ಗೆದ್ದಿದ್ದರು. ಪಿಟಿಐ ಪಕ್ಷ 270ರಲ್ಲಿ 116 ಸ್ಥಾನಗಳಲ್ಲಿ ಗೆದ್ದಿತ್ತು. ಬಳಿಕ ಅದೇ ವರ್ಷದ ಆ.18ರಂದು ಪ್ರಧಾನಿಯಾಗಿ ಪಟ್ಟಕ್ಕೇರಿದ ಇಮ್ರಾನ್‌, ಸೇನೆಯ ನಲುಮೆಯ ಕೂಸಾಗಿದ್ದರು. ತೀರಾ ಇತ್ತೀಚಿನ ವರೆಗೂ ಸೇನೆಯ ಎಲ್ಲ ಮಾತುಗಳನ್ನು ಕೇಳುತ್ತಿದ್ದ ಇಮ್ರಾನ್‌, ಐಎಸ್‌ಐ ಮುಖ್ಯಸ್ಥರ ವಿಚಾರದಲ್ಲಿ ಮಾತ್ರ ಮೊಂಡಾಟ ಮಾಡಿದ್ದರು.

ಏನಿದು ಐಎಸ್‌ಐ ಗಲಾಟೆ?
ಸದ್ಯ ಪಾಕಿಸ್ಥಾನದ ಐಎಸ್‌ಐ ಮುಖ್ಯಸ್ಥರಾಗಿರುವ ಲೆ|ಜ| ಫ‌ಯಜ್‌ ಹಮೀದ್‌ ಅವರನ್ನು ಮುಂದುವರಿಸಬೇಕು ಎಂಬುದು ಪ್ರಧಾನಿ ಇಮ್ರಾನ್‌ ಖಾನ್‌ ಅವರ ಹಠ. ಆದರೆ ಪಾಕ್‌ ಸೇನೆ ಮಾತ್ರ ಇವರನ್ನು ಮುಂದುವರಿಸಲು ಒಪ್ಪಿರಲಿಲ್ಲ. ಈ ಬಗ್ಗೆ ಹಲವಾರು ದಿನಗಳ ವರೆಗೆ ಬಿಕ್ಕಟ್ಟು ಮುಂದುವರಿದೇ ಇತ್ತು. ಕಡೆಗೂ ಸೇನೆಯ ಒತ್ತಾಯಕ್ಕೆ ಮಣಿದ ಇಮ್ರಾನ್‌ ಖಾನ್‌, ಹಮೀದ್‌ರನ್ನು ಬದಲಿಸಲು ಒಪ್ಪಿದರು. ಇವರಿಗೆ ಬದಲಾಗಿ ಲೆ| ಜನರಲ್‌ ನದೀಮ್‌ ಅಂಜುಮ್‌ ಅವರನ್ನು ಐಎಸ್‌ಐ ಡಿಜಿಯಾಗಿ ನೇಮಕ ಮಾಡಲು ಒಪ್ಪಿದರು. ಇವರು ಇದೇ 20ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಂದೇ ಇಮ್ರಾನ್‌ ಪಾಲಿಗೆ ಕಡೇ ದಿನ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಡಿಸೆಂಬರ್ ಅಂತ್ಯದೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಹೈಕೋರ್ಟ್​ ನಿರ್ದೇಶನ

ಅಲ್ಪಮತಕ್ಕೆ ಕುಸಿಯುವ ಭೀತಿ
ಪಾಕಿಸ್ಥಾನ ಸೇನೆ ಇಮ್ರಾನ್‌ ಖಾನ್‌ ಪದಚ್ಯುತಿಗೆ ನೇರವಾಗಿ ಪ್ರಯತ್ನಿಸದೇ, ಹಿಂಬಾಗಿಲ ಮೂಲಕ ಎಲ್ಲ ರೀತಿಯ ಸಂಚು ರೂಪಿಸುತ್ತಿದೆ. ಟೆಹ್ರಿಕ್‌ ಎ ತಾಲಿಬಾನ್‌ ಉಗ್ರ ಸಂಘಟನೆಯ ಸದಸ್ಯರನ್ನು ಜೈಲಿನಿಂದ ಬಿಡುಗಡೆ ಮಾಡುತ್ತಿದ್ದ ಹಾಗೆ, ಇತ್ತ ಇಮ್ರಾನ್‌ ಖಾನ್‌ ಸರಕಾರಕ್ಕೆ ನೀಡಲಾಗಿದ್ದ ಬೆಂಬಲವನ್ನು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ ಮತ್ತು ಪಾಕಿಸ್ಥಾನ್‌ ಮುಸ್ಲಿಂ ಲೀಗ್‌ ಪಕ್ಷಗಳು ವಾಪಸ್‌ ಪಡೆದಿವೆ. ನ.20ರಂದು ಐಎಸ್‌ಐ ಮುಖ್ಯಸ್ಥರಾಗಿ ನದೀಮ್‌ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ, ವಿಪಕ್ಷಗಳು ಇಮ್ರಾನ್‌ ಸರಕಾರದ ವಿರುದ್ಧ ಅವಿಶ್ವಾಸ ಮತ ಮಂಡನೆ ಮಾಡಲಿವೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಇಮ್ರಾನ್‌ ಬದಲಿಗೆ ಅವರದ್ದೇ ಪಕ್ಷದ ಇಬ್ಬರನ್ನು ಪ್ರಧಾನಿಯನ್ನಾಗಿ ಮಾಡಲು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಉಗ್ರರ ಜತೆ ಸ್ನೇಹ
ಇಮ್ರಾನ್‌ ಖಾನ್‌ ಅವರ ಮತ್ತೂಂದು ತಪ್ಪು ಉಗ್ರರ ಜತೆಗೆ ಅತಿಯಾದ ಸ್ನೇಹ ಹೊಂದಿರುವುದು. ಇತ್ತೀಚೆಗಷ್ಟೇ ಪಾಕಿಸ್ಥಾನದ ಸುಪ್ರೀಂಕೋರ್ಟ್‌, ಇಮ್ರಾನ್‌ ಖಾನ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದಕ್ಕೆ ಕಾರಣ, ಪೇಶಾವರದ ಶಾಲೆಯೊಂದರ ಮೇಲೆ ದಾಳಿ ನಡೆಸಿ, ನೂರಾರು ಮಕ್ಕಳ ಸಾವಿಗೆ ಕಾರಣವಾಗಿದ್ದ ತೆಹ್ರಿಕ್‌ ಇ ತಾಲಿಬಾನ್‌ ಉಗ್ರ ಸಂಘಟನೆಯ ಜತೆಗೆ ಇಮ್ರಾನ್‌ ಖಾನ್‌ ಶಾಂತಿ ಒಪ್ಪಂದ ಮಾಡಿಕೊಂಡಿದ್ದು. ಅಷ್ಟೇ ಅಲ್ಲ, ವಿವಿಧ ಜೈಲುಗಳಲ್ಲಿದ್ದ ಈ ಸಂಘಟನೆಯ ನಾಯಕರನ್ನು ಬಿಡುಗಡೆ ಮಾಡಲಾಗಿತ್ತು. ಉಗ್ರ ಸಂಘಟನೆಯ ಜತೆ ಈ ರೀತಿ ಶಾಂತಿ ಒಪ್ಪಂದ ಮಾಡಿಕೊಳ್ಳುವ ಆವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್‌, ಅಂದು ಮಕ್ಕಳನ್ನು ಕಳೆದುಕೊಂಡಿದ್ದ ಹೆತ್ತವರಿಗೆ ಏನು ಉತ್ತರ ಹೇಳುತ್ತೀರಿ ಎಂದೂ ಪ್ರಶ್ನಿಸಿತ್ತು. ಇದರ ಜತೆಗೆ ತಾಲಿಬಾನ್‌ ನಾಯಕರ ಜತೆಗಿನ ಇಮ್ರಾನ್‌ ಖಾನ್‌ ಅವರ ಅತಿಯಾದ ಸ್ನೇಹವೂ ಪಾಕಿಸ್ಥಾನದ ಸೇನೆಯ ಕೋಪಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

ಫ‌ಯಾಜ್‌ ಹಮೀದ್‌ ತಾಲಿಬಾನ್‌ ಪ್ರೇಮಿ
ಹಾಲಿ ಐಎಸ್‌ಐ ಮುಖ್ಯಸ್ಥ ಫ‌ಯಾಜ್‌ ಹಮೀದ್‌ ಅವರು ತಾಲಿಬಾನ್‌ ಪ್ರೇಮಿ. ಇತ್ತೀಚೆಗಷ್ಟೇ ಅಫ್ಘಾನಿಸ್ಥಾನದಲ್ಲಾದ ಎಲ್ಲ ಬೆಳವಣಿಗೆಗಳ ಹಿಂದೆ ಹಮೀದ್‌ ಅವರ ಕೈವಾಡವಿತ್ತು. ಸರಕಾರ ರಚನೆಗೂ ಮುನ್ನ ಕಾಬೂಲ್‌ಗೆ ತೆರಳಿದ್ದ ಹಮೀದ್‌, ಇದರಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ತಾಲಿಬಾನಿಗಳು ಮತ್ತು ಹಕ್ಕಾನಿಗಳ ನಡುವಿನ ಜಗಳಕ್ಕೂ ಸಾಕ್ಷಿಯಾಗಿದ್ದರು.ಹಮೀದ್‌ ಅವರ ತಾಲಿಬಾನ್‌ ಪ್ರೇಮ ಪಾಕಿಸ್ಥಾನದ ಸೇನೆಗೆ ಹಿಡಿಸಲಿಲ್ಲ. ಒಂದು ಕಡೆ ಇಮ್ರಾನ್‌ ಖಾನ್‌, ತಾಲಿಬಾನಿಯರ ಮೇಲೆ ಪ್ರೀತಿ ಉಳಿಸಿಕೊಂಡು, ಇಡೀ ಅಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಹವಣಿಸುತ್ತಿದ್ದರು. ಆದರೆ ತಾಲಿಬಾನಿಗಳ ಮೇಲಿನ ಪ್ರೀತಿಯಿಂದಾಗಿ ಜಾಗತಿಕ ಮಟ್ಟದಲ್ಲಿ

ಪಾಕಿಸ್ಥಾನದ ಹೆಸರಿಗೆ ಹಾನಿಯಾಗುತ್ತದೆ ಎಂಬುದು ಪಾಕ್‌ ಸೇನೆಯ ನಿಲುವಾಗಿತ್ತು. ಹೀಗಾಗಿಯೇ ತಾಲಿಬಾನ್‌ ಮೇಲೆ ಪ್ರೀತಿ ಇರಿಸಿಕೊಂಡಿದ್ದ ಹಮೀದ್‌ರನ್ನು ತೆಗೆಯಲೇಬೇಕು ಎಂದು ಸೇನೆ ಪಣತೊಟ್ಟಿತ್ತು.

ನವಾಜ್‌ ವಾಪಸ್‌?
ಸದ್ಯ ದೇಶಭ್ರಷ್ಟರಾಗಿ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಇರುವ ಮಾಜಿ ಪ್ರಧಾನಿ ನವಾಜ್‌ ಶರೀಫ್ ವಾಪಸ್‌ ಪಾಕಿಸ್ಥಾನಕ್ಕೆ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನವಾಜ್‌ ಶರೀಫ್ ವಿರುದ್ಧ ಇದ್ದ ಎರಡು ಆರೋಪಗಳ ಸಂಬಂಧ ಒಟ್ಟಾರೆ 17 ವರ್ಷಗಳ ಜೈಲು ಶಿಕ್ಷೆ ನಿಗದಿಯಾಗಿದೆ. ಆದರೆ, ಶರೀಫ್ ಅವರಿಗೆ ಅನಾರೋಗ್ಯದ ಕಾರಣ, ಪಾಕ್‌ನ ಸುಪ್ರೀಂ ಕೋರ್ಟ್‌ ಚಿಕಿತ್ಸೆಗಾಗಿ ಯುನೈಟೆಡ್‌ ಕಿಂಗ್‌ಡಮ್‌ಗೆ ಹೋಗಲು ಅವಕಾಶ ಕಲ್ಪಿಸಿತ್ತು. 2019ರಲ್ಲಿ ಅಲ್ಲಿಗೆ ತೆರಳಿದವರು ಇನ್ನೂ ವಾಪಸ್‌ ಬಂದಿಲ್ಲ. ಈಗ ಪಾಕ್‌ ಸೇನೆಯೇ ಇವರನ್ನು ವಾಪಸ್‌ ಕರೆಸಿಕೊಂಡು, ದೇಶದ ಚುಕ್ಕಾಣಿ ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಇವರ ವಿರುದ್ಧದ ಆರೋಪಗಳ ವಿಚಾರದಲ್ಲಿ ಅಲ್ಲಿನ ನ್ಯಾಯಮೂರ್ತಿಯೊಬ್ಬರು ಗೋಲ್‌ಮಾಲ್‌ ಮಾಡಿದ್ದಾರೆ ಎಂಬ ಸುದ್ದಿಗಳಿವೆ. ಈ ಬಗ್ಗೆಯೂ ಪಾಕಿಸ್ಥಾನದಲ್ಲಿ ಭಾರೀ ಸದ್ದಾಗುತ್ತಿದೆ. ಇವೆಲ್ಲವುಗಳನ್ನು ಗಮನದಲ್ಲಿ ಇರಿಸಿಕೊಂಡು ನವಾಜ್‌ ಷರೀಫ್ರನ್ನೇ ವಾಪಸ್‌ ಕರೆಸಿಕೊಂಡು ಮತ್ತೆ ಪ್ರಧಾನಿ ಪಟ್ಟ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ ನವಾಜ್‌ ಶರೀಫ್ ಪಾಕಿಸ್ಥಾನಕ್ಕೆ ಬಂದ ಕೂಡಲೇ, ಇಮ್ರಾನ್‌ ಖಾನ್‌ ತಾವೇ ತಾವಾಗಿ ರಾಜೀನಾಮೆ ನೀಡುವ ಪ್ರಸಂಗ ಬಂದರೂ ಬರಬಹುದು ಎಂದು ಕೆಲವು ಆಂಗ್ಲ ವೆಬ್‌ಸೈಟ್‌ಗಳ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.