ಲಾಹೋರ್: ಪಾಕಿಸ್ತಾನದಲ್ಲಿ ಮತ್ತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ಪ್ರಹಸನ ನಡೆದಿದೆ.
ಪ್ರಧಾನಿ ಹುದ್ದೆಯಲ್ಲಿದ್ದಾಗ ದೊರೆತಿದ್ದ ಉಡುಗೊರೆಗಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ ಇಮ್ರಾನ್ ಖಾನ್‌ರನ್ನು ಬಂಧಿಸಲು ಅವರ ಲಾಹೋರ್ ನಿವಾಸಕ್ಕೆ ತೆರಳಿದ್ದಾರೆ. ಈ ವೇಳೆ ಹೈಡ್ರಾಮಾ ನಡೆದಿದ್ದು, ಮಾ.7ರಂದು ಕೋರ್ಟ್‌ಗೆ ಹಾಜರಾಗುವುದಾಗಿ ಖಾನ್ ಅವರ ಕಾನೂನು ತಂಡ ಖಾತ್ರಿಪಡಿಸಿದ ಬಳಿಕ ಪೊಲೀಸರು ವಾಪಸಾಗಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸತತವಾಗಿ ನೋಟಿಸ್ ನೀಡಿದ್ದರೂ, ಖಾನ್ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ವಾರ ಕೋರ್ಟ್ ಜಾಮೀನುರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು.
ಅದರಂತೆ, ಪೊಲೀಸರ ತಂಡವು ಭಾನುವಾರ ಇಸ್ಲಾಮಾಬಾದ್‌ನಿಂದ ಲಾಹೋರ್‌ಗೆ ಧಾವಿಸಿತ್ತು. ಆದರೆ, ಈ ವಿಚಾರ ತಿಳಿಯುತ್ತಿದ್ದಂತೆಯೇ ಇಮ್ರಾನ್ ಖಾನ್ ತಮ್ಮ ಮನೆಯ ಕೋಣೆಯೊಂದರಲ್ಲಿ ಅಡಗಿದ್ದರು. ಪೊಲೀಸರು ಬಂದಾಗ ಅವರು ಮನೆಯಲ್ಲಿಲ್ಲ ಎಂದು ಹೇಳಿ ಕಳುಹಿಸಲಾಯಿತು. ಆದರೆ, ಸ್ವಲ್ಪ ಹೊತ್ತಲ್ಲೇ ಮನೆಯಿಂದ ಹೊರಬಂದ ಇಮ್ರಾನ್, ಮನೆಯ ಹೊರಗೆ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣವನ್ನೂ ಮಾಡಿದ್ದು ಕಂಡುಬಂತು.