ಲಾಹೋರ್ : ಪಾಕಿಸ್ಥಾನದ ಮುಂದಿನ ಪ್ರಧಾನಿಯಾಗುವ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಇಮ್ರಾನ್ ಅವರ ಪಿಟಿಐ ಪಕ್ಷ ಎಲ್ಲ ಸಾರ್ಕ್ ನಾಯಕರನ್ನು ಆಹ್ವಾನಿಸುವುದನ್ನು ಪರಿಗಣಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಪಾಕ್ ಮಹಾ ಚುನಾವಣೆಯಲ್ಲಿ ಇಮ್ರಾನ್ ಅವರ ಪಿಟಿಐ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿದೆ. ಅಂತೆಯೇ ಇಮ್ರಾನ್ ದೇಶದ ಪ್ರಧಾನಿಯಾಗಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿ ಸಹಿತ ಎಲ್ಲ ಸಾರ್ಕ್ ನಾಯಕರನ್ನು ಆಹ್ವಾನಿಸುವುದನ್ನು ಪಿಟಿಐ ಪಕ್ಷ ಪರಿಗಣಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ಶೀಘ್ರವೇ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಪಿಟಿಐ ನಾಯಕರೋರ್ವರು ಹೇಳಿರುವುದನ್ನು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಇಮ್ರಾನ್ ಖಾನ್ ಅವರು ಆಗಸ್ಟ್ 11ರಂದು ತಾನು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಈಗಾಗಲೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ತನ್ನನ್ನು ಅಭಿನಂದಿಸಲು ಫೋನ್ ಕರೆ ಮಾಡಿರವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಇದರಿಂದ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭಗೊಂಡಂತಾಗಿದೆ ಎಂದವರು ಹೇಳಿದ್ದಾರೆ.
ಪಿಟಿಐ ಪಕ್ಷದ ವಕ್ತಾರ ಫವಾದ್ ಚೌಧರಿ ಅವರು “ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ. ಪಾಕ್ ವಿದೇಶ ಸಚಿವಾಲಯ ಈ ವಿಷಯದಲ್ಲಿ ಬೇಗನೆ ನಿರ್ಧಾರ ಕೈಗೊಳ್ಳುವುದೆಂದು ಅವರು ಹೇಳಿದ್ದಾರೆ.