ಇಸ್ಲಾಮಾಬಾದ್ : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಂದು ಬುಧವಾರ ದೇಶದ ಅಣ್ವಸ್ತ್ರಗಳ ನಿರ್ವಹಣೆ, ನಿಯಂತ್ರಣ, ನಿಯೋಜನೆ ಮತ್ತು ಬಳಕೆ ಹೊಣೆ ಹೊತ್ತಿರುವ ಉನ್ನತ ನಿರ್ಧಾರ ಕೈಗೊಳ್ಳುವ ನ್ಯಾಶನಲ್ ಕಮಾಂಡ್ ಅಥಾರಿಟಿಯ (NCA) ತುರ್ತು ಸಭೆಯನ್ನು ಇಂದು ಬುಧವಾರ ಕರೆದಿದ್ದಾರೆ.
ಪಾಕಿಸ್ಥಾನದ ಸಮೂಹ ನಾಶಕ ಅಣ್ವಸ್ತ್ರಗಳ ನಿಯಂತ್ರಣ ನೀತಿ ರೂಪಣೆ, ನಿಯೋಜನೆ, ಕಾರ್ಯನಿರ್ವಹಣೆ, ಬಳಕೆ, ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿಗಳ ಹೊಣೆಗಾರಿಕೆಯು ನ್ಯಾಶನಲ್ ಕಮಾಂಡ್ ಅಥಾರಿಟಿ ಇದರ ಕೈಯಲ್ಲಿದೆ. ಇದು ಸಿವಿಲ್ – ಮಿಲಿಟರಿ ಉನ್ನತ ಮಟ್ಟದ ಸಂಸ್ಥೆಯಾಗಿದೆ.
ನಿನ್ನೆ ಮಂಗಳವಾರ ನಡೆದಿದ್ದ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯಲ್ಲಿ ಇಂದು ಬುಧವಾರ ಎನ್‌ಸಿಎ (ನ್ಯಾಶನಲ್ ಕಮಾಂಡ್ ಅಥಾರಿಟಿ) ಸಭೆ ಕರೆಯುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆ ಪ್ರಕಾರ ಇಂದು ಎನ್‌ಸಿಎ ತುರ್ತು ಸಭೆ ನಡೆಯಲಿದೆ.
ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತೀಯ ವಾಯು ಪಡೆ ಪ್ರತೀಕಾರದ ಕ್ರಮವಾಗಿ ವಾಯು ದಾಳಿ ನಡೆಸಿ ಪಾಕಿಸ್ಥಾನದಲ್ಲಿನ ವಿವಿಧೆಡೆಯ ಉಗ್ರ ಶಿಬಿರಗಳನ್ನು ನಾಶಪಡಿಸಿ 300ಕ್ಕೂ ಅಧಿಕ ಉಗ್ರರನ್ನು ಬಲಿ ಪಡೆದಿತ್ತು. ಇದರ ಪರಿಣಾಮವಾಗಿ ಭಾರತದ ಮೇಲೆ ಪ್ರತಿ ದಾಳಿ ನಡೆಸುವ ಕ್ರಮವಾಗಿ ಪಾಕಿಸ್ಥಾನ ಇಂದು ಎನ್‌ಸಿಎ ತುರ್ತು ಸಭೆ ಮತ್ತು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಕೂಡ ಕರೆದಿದೆ.
ಪಾಕ್ ಸಂಸತ್ ನಾಯಕರ ಜತೆಗೆ ಪಾಕ್ ಸರಕಾರ ಮುಚ್ಚಿದ ಬಾಗಿಲ ಹಿಂದೆ ಸಭೆ ನಡೆಸಲಿದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ಪಾಕ್ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಪುಲ್ವಾಮಾ ಉಗ್ರ ದಾಳಿಯ ಬಳಿಕ ಭಾರತ ಪಾಕಿಸ್ಥಾನಕ್ಕೆ ಬೆದರಿಕೆಗಳನ್ನು ಹಾಕಿದ್ದು ಎಲ್‌ಓಸಿ ಉಲ್ಲಂಘನೆ ಗೈದು ದಾಳಿ ನಡೆಸಿದೆ; ನಮಗೆ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ಆ ಪ್ರಕಾರ ನಾವು ಸ್ವರಕ್ಷಣೆಗಾಗಿ ಭಾರತದ ಮೇಲೆ ಪ್ರತಿ ದಾಳಿ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.