ಕಾಬೂಲ್: ಪಾಕಿಸ್ತಾನದ ತಮಗೆ ಎರಡನೇ ಮನೆ ಇದ್ದಂತೆ ಎಂದು ಬಣ್ಣಿಸಿರುವ ಅಫ್ಘಾನಿಸ್ತಾನದ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, ನೆರೆಯ ದೇಶದ ಜತೆಗಿನ ವಹಿವಾಟು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು. ಅಲ್ಲದೇ ಭಾರತದ ಜತೆ ತಾಲಿಬಾನ್ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹಿರಿಯ ನಟ ದೊಡ್ಡಣ್ಣಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ಪಾಕಿಸ್ತಾನ ಅಫ್ಘಾನಿಸ್ತಾನದ ಗಡಿಭಾಗವನ್ನು ಹಂಚಿಕೊಂಡಿದೆ. ಧಾರ್ಮಿಕ ವಿಚಾರಕ್ಕೆ ಬಂದಾಗ ನಾವು ಸಾಂಪ್ರದಾಯಿಕವಾಗಿ ಒಂದೇ ಆಗಿದ್ದೇವೆ. ಉಭಯ ದೇಶಗಳ ಜನರು ಕೂಡಾ ಪರಸ್ಪರ ಬೆರೆಯುತ್ತಾರೆ. ಆ ನಿಟ್ಟಿನಲ್ಲಿ ಪಾಕಿಸ್ತಾನದ ಜತೆಗಿನ ಸಂಬಂಧವನ್ನು ಇನ್ನಷ್ಟು ಬಲಗೊಳ್ಳುವುದನ್ನು ನಾವು ಎದುರು ನೋಡುತ್ತಿರುವುದಾಗಿ ಮುಜಾಹಿದ್ ಪಾಕಿಸ್ತಾನ ಮೂಲದ ಎಆರ್ ವೈ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುವ ವಿಚಾರದಲ್ಲಿ ಪಾಕಿಸ್ತಾನದ ಯಾವ ಪಾತ್ರವೂ ಇಲ್ಲ ಎಂದು ಮುಜಾಹಿದ್ ತಿಳಿಸಿದ್ದು, ಅಫ್ಘಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನ ಯಾವತ್ತೂ ಮಧ್ಯಪ್ರವೇಶಿಸಿಲ್ಲ ಎಂದು ಮುಜಾಹಿದ್ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಪಾಕಿಸ್ತಾನ ಮತ್ತು ಭಾರತ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಅಲ್ಲದೇ ಭಾರತ ಸೇರಿದಂತೆ ಎಲ್ಲಾ ದೇಶಗಳ ಜತೆಯೂ ಉತ್ತಮ ಬಾಂಧವ್ಯ ಹೊಂದುವುದು ತಾಲಿಬಾನ್ ಉದ್ದೇಶವಾಗಿದೆ ಎಂದು ಮುಜಾಹಿದ್ ತಿಳಿಸಿದ್ದಾನೆ.