Advertisement

ಟಿ20 ಸರಣಿ ಗೆದ್ದ ಪಾಕ್‌ ನಂ.1

06:35 AM Jan 29, 2018 | Team Udayavani |

ಮೌಂಟ್‌ ಮಾಂಗನಿ: ಆತಿಥೇಯ ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಸರಣಿ ಪಾಕಿಸ್ಥಾನದ ಪಾಲಾಗಿದೆ. ರವಿವಾರ ಇಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯವನ್ನು 18 ರನ್‌ಗಳಿಂದ ಗೆದ್ದ ಪಾಕಿಸ್ಥಾನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಳ್ಳುವುದರ ಜತೆಗೆ ತಂಡ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿತು. ನ್ಯೂಜಿಲ್ಯಾಂಡ್‌ 2ನೇ ಸ್ಥಾನಕ್ಕೆ ಕುಸಿಯಿತು.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 8 ವಿಕೆಟಿಗೆ 181 ರನ್‌ ಪೇರಿಸಿ ಕಠಿನ ಸವಾಲೊಡ್ಡಿತು. ಜವಾಬಿತ್ತ ನ್ಯೂಜಿಲ್ಯಾಂಡಿಗೆ ಗಳಿಸಲು ಸಾಧ್ಯವಾದದ್ದು 6ಕ್ಕೆ 163 ರನ್‌ ಮಾತ್ರ. ಮೊದಲ ಪಂದ್ಯವನ್ನು ನ್ಯೂಜಿಲ್ಯಾಂಡ್‌ 7 ವಿಕೆಟ್‌ಗಳಿಂದ ಗೆದ್ದರೆ, ಎರಡನೆಯದು 48 ರನ್‌ ಅಂತರದಿಂದ ಪಾಕ್‌ ಪಾಲಾಗಿತ್ತು. ಇದಕ್ಕೂ ಹಿಂದಿನ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ಥಾನ 5-0 ವೈಟ್‌ವಾಶ್‌ ಸಂಕಟಕ್ಕೆ ಸಿಲುಕಿತ್ತು.

ಸಾಂ ಕ ಬ್ಯಾಟಿಂಗ್‌ ಪ್ರದರ್ಶನದಿಂದ ಪಾಕಿಸ್ಥಾನದ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ದಾಖಲಾಯಿತು. ಆರಂಭಕಾರ ಫ‌ಕರ್‌ ಜಮಾನ್‌ 46 ರನ್‌ (36 ಎಸೆತ, 5 ಬೌಂಡರಿ, 1 ಸಿಕ್ಸರ್‌), ನಾಯಕ ಸಫ‌ìರಾಜ್‌ ಅಹ್ಮದ್‌ 29 ರನ್‌, ಉಮರ್‌ ಅಮಿನ್‌ ಕೇವಲ 7 ಎಸೆತಗಳಿಂದ 21 ರನ್‌ ಹೊಡೆದರು. ಅಮಿನ್‌ ಬೀಸುಗೆಯ ವೇಳೆ 3 ಸಿಕ್ಸರ್‌ ಸಿಡಿಯಲ್ಪಟ್ಟಿತು. ಹ್ಯಾರಿಸ್‌ ಸೊಹೈಲ್‌(20) ಮತ್ತು ಆಮಿರ್‌ ಯಾಮಿನ್‌ (15) ಔಟಾಗದೆ ಉಳಿದರು.

ಕಿವೀಸ್‌ ಪ್ರಯತ್ನ ವಿಫ‌ಲ
ನ್ಯೂಜಿಲ್ಯಾಂಡ್‌ ಆರಂಭ ಅಬ್ಬರದಿಂದಲೇ ಕೂಡಿತ್ತು. ನಾಯಕ ಕೇನ್‌ ವಿಲಿಯಮ್ಸನ್‌ (9) ಬೇಗನೇ ನಿರ್ಗಮಿಸಿದರೂ ಮಾರ್ಟಿನ್‌ ಗಪ್ಟಿಲ್‌ ಸಿಡಿಯುತ್ತ ಹೋದರು. ಅವರಿಂದ ಈ ಪಂದ್ಯದ ಏಕೈಕ ಅರ್ಧ ಶತಕ ದಾಖಲಾಯಿತು. 43 ಎಸೆತ ಎದುರಿಸಿದ ಗಪ್ಟಿಲ್‌ 4 ಸಿಕ್ಸರ್‌, 2 ಬೌಂಡರಿ ನೆರವಿನಿಂದ 59 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅನರು ಕಿಚನ್‌ 16, ಟಾಮ್‌ ಬ್ರೂಸ್‌ 22, ರಾಸ್‌ ಟಯ್ಲರ್‌ 25 ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಅಜೇಯ 24 ರನ್‌ ಹೊಡೆದರೂ ರನ್‌ಗತಿ ಏರುತ್ತಲೇ ಹೋದದ್ದು ಕಿವೀಸ್‌ ಸಂಕಟವನ್ನು ಬಿಗಡಾಯಿಸುವಂತೆ ಮಾಡಿತು. ಟಯ್ಲರ್‌ ಸಿಡಿದು ನಿಂತಾಗ (11 ಎಸೆತ, 25 ರನ್‌, 3 ಸಿಕ್ಸರ್‌) ಪಂದ್ಯ ರೋಚಕ ಹಂತ ಮುಟ್ಟಿತ್ತು. ಆದರೆ ಅವರು 17ನೇ ಓವರಿನಲ್ಲಿ ಔಟಾಗುವುದರೊಂದಿಗೆ ಪಾಕ್‌ ಕೈ ಮೇಲಾಯಿತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-6 ವಿಕೆಟಿಗೆ 181 (ಜಮಾನ್‌ 46, ಸಫ‌ìರಾಜ್‌ 29, ಅಮಿನ್‌ 21, ಸೊಹೈಲ್‌ 20, ಸ್ಯಾಂಟ್ನರ್‌ 24ಕ್ಕೆ 2, ಸೋಧಿ 47ಕ್ಕೆ 2). ನ್ಯೂಜಿಲ್ಯಾಂಡ್‌-6 ವಿಕೆಟಿಗೆ 163 (ಗಪ್ಟಿಲ್‌ 59, ಟಯ್ಲರ್‌ 25, ಸ್ಯಾಂಟ್ನರ್‌ ಔಟಾಗದೆ 24, ಶಾದಾಬ್‌ ಖಾನ್‌ 19ಕ್ಕೆ 2). ಪಂದ್ಯಶ್ರೇಷ್ಠ: ಶಾದಾಬ್‌ ಖಾನ್‌, ಸರಣಿಶ್ರೇಷ್ಠ: ಮೊಹಮ್ಮದ್‌ ಆಮಿರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next