ಪಾಟ್ನಾ: 1975 ಮತ್ತು 1971ರಲ್ಲಿ ಮಾಡಿದ ತಪ್ಪನ್ನು ಪಾಕಿಸ್ಥಾನ ಮತ್ತೆ ಮಾಡಲು ಬಂದರೆ ನಾವು ಸುಮ್ಮನಿರಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಾಟ್ನಾದಲ್ಲಿ ದಿಲ್ಲಿ ಸಾರ್ವಜನಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1965, 1971ರಲ್ಲಿ ನಮ್ಮ ಮೇಲೆ ಯುದ್ಧ ಸಾರಿದಂತೆ ಈ ಬಾರಿ ಕೇಂದ್ರ ಸರಕಾರ ಕೈಗೊಂಡ 370ನೇ ವಿಧಿ ರದ್ದು ನಿರ್ಧಾರಕ್ಕೆ ಪ್ರತೀಕಾರವಾಗಿ ದಂಡೆತ್ತಿ ಬಂದರೆ ಪರಿಣಾಮ ಒಳ್ಳೆಯದಾಗಲಿಕ್ಕಿಲ್ಲ ಎಂದು ಎಚ್ಚರಿಸಿದ್ದಾರೆ.
ಗಡಿಯಾಚೆಯಿಂದ ಉಗ್ರರಿಗೆ ಬೆಂಬಲ ನೀಡಿದರೆ, ಅದರ ಪರಿಣಾಮವೂ ಉತ್ತಮವಾಗಲಿಕ್ಕಿಲ್ಲ. ಆ ದೇಶದ ಜತೆಗೆ ಮಾತುಕತೆ ನಡೆಯಲೇಬೇಕು ಎಂದಾದರೆ, ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಮತ್ತು ಜಮ್ಮು ಮತ್ತು ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ ಎನ್ನುವುದನ್ನು ಆ ದೇಶ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಅಲ್ಲದೆ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹೆಚ್ಚಿನ ಜನರು ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದಕ್ಕೆ ಬೆಂಬಲ ನೀಡಿದ್ದಾರೆ ಎಂದೂ ಹೇಳಿದ್ದಾರೆ. “ಸಂವಿಧಾನದ 370ನೇ ವಿಧಿ ಬಗ್ಗೆ ಆಡಳಿತದಲ್ಲಿ ಇದ್ದಾಗ ಅಥವಾ ವಿಪಕ್ಷದಲ್ಲಿ ಇದ್ದಾಗಲೂ ಬಿಜೆಪಿ ಯಾವುದೇ ರೀತಿ ಯಲ್ಲಿ ನಿಲುವು ಬದಲಾವಣೆ ಮಾಡಿಯೇ ಇರಲಿಲ್ಲ. ಆ. 5ರಂದು ಕೇಂದ್ರ ಸರಕಾರ ಸಂಸತ್‌ನಲ್ಲಿ ಘೋಷಣೆ ಮಾಡಿದ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರದ ಮೂರನೇ ನಾಲ್ಕರಷ್ಟು ಮಂದಿ ಬೆಂಬಲಿಸಿದ್ದಾರೆ. ಅದೊಂದು ಕ್ಯಾನ್ಸರ್‌ನಂತೆ ರಾಜ್ಯಕ್ಕೆ ಹಲವು ರೀತಿಯಲ್ಲಿ ತೊಂದರೆ ನೀಡುತ್ತಿತ್ತು’ ಎಂದು ಹೇಳಿದ್ದಾರೆ.
ಕಣಿವೆ ರಾಜ್ಯದಲ್ಲಿ ಗುಲಾಂ ನಬಿ: ಸುಪ್ರೀಂ ಕೋರ್ಟ್ ಅನುಮತಿ ಬಳಿಕ ಕಣಿವೆ ರಾಜ್ಯಕ್ಕೆ 3 ದಿನಗಳ ಕಾಲ ಭೇಟಿ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ದಿಲ್ಲಿ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಗೆ ತೆರಳಿ, ಸರಕಾರಿ ಹೌಸಿಂಗ್ ಕಾಲನಿಯಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಜೈಲು ಎಂದು ಘೋಷಿಸಲ್ಪಟ್ಟ ಡಾಕ್ ಬಂಗಲೆಗೆ ಭೇಟಿ ನೀಡಲು ಅವರು ಯತ್ನಿಸಿದ್ದು, ಅದಕ್ಕೆ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್‌ನ ಸ್ಥಳೀಯ ನಾಯಕ ರೊಬ್ಬರು ತಿಳಿಸಿದ್ದಾರೆ.
ಸ್ಟಾರ್ಟಪ್ ವೀಕೆಂಡ್: ಉದ್ಯಮ ಶೀಲತೆಗೆ ಉತ್ತೇಜನ ನೀಡುವ ಉದ್ದೇಶ ದಿಂದ ಭಾರತೀಯ ಸೇನೆಯು ರಿಯಾಸಿ ಜಿಲ್ಲೆಯಲ್ಲಿ “ಸ್ಟಾರ್ಟಪ್ ವೀಕೆಂಡ್’ ಎಂಬ ಕಾರ್ಯಕ್ರಮ ಆಯೋಜಿಸಿದೆ. ಈ ಮೂಲಕ ಉದ್ಯಮಿಗಳು ತಮ್ಮ ಬ್ಯುಸಿನೆಸ್ ಮಾಡೆಲ್‌ಗಳನ್ನು ಹೂಡಿಕೆದಾರರಿಗೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.
ಗೃಹ ಬಂಧನದಲ್ಲಿರುವ ಕಾಶ್ಮೀರದ ರಾಜಕೀಯ ನೇತಾರರನ್ನು ಅತಿಥಿಗಳ ರೀತಿ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ಹಾಲಿವುಡ್ ಸಿನೆಮಾ ಸಿ.ಡಿ. ಗಳನ್ನು, ಅವರಿಷ್ಟದ ಆಹಾರವನ್ನು ನೀಡಲಾಗುತ್ತಿದೆ. 18 ತಿಂಗಳಿಗಿಂತ ಹೆಚ್ಚು ಕಾಲ ಅವರನ್ನು ಬಂಧನದಲ್ಲಿ ಇಟ್ಟುಕೊಳ್ಳುವುದಿಲ್ಲ.
– ಜಿತೇಂದ್ರ ಸಿಂಗ್, ಕೇಂದ್ರ ಸಚಿವ