Advertisement

ವಾಟ್ಸಾಪ್‌ ನಲ್ಲಿ ಧರ್ಮನಿಂದನೆ ಬಗ್ಗೆ ಪೋಸ್ಟ್ ಹಾಕಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ

10:44 AM Mar 26, 2023 | Team Udayavani |

ಇಸ್ಲಾಮಾಬಾದ್: ವಾಟ್ಸಾಪ್ ನಲ್ಲಿ ಧರ್ಮನಿಂದನೆಯ ವಿಚಾರವನ್ನು ಹಂಚಿಕೊಂಡ ಕಾರಣ ವ್ಯಕ್ತಿಯೊಬ್ಬನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

Advertisement

ಇಲೆಕ್ಟ್ರಾನಿಕ್ ಅಪರಾಧಗಳ ತಡೆ ಕಾಯ್ದೆ ಮತ್ತು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪೇಶಾವರದ ನ್ಯಾಯಾಲಯ ಶುಕ್ರವಾರ ಸೈಯದ್ ಮುಹಮ್ಮದ್ ಜೀಶನ್ ಅವರನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ.

ಬಂಧನದಲ್ಲಿರುವ ಸೈಯದ್ ಜಕಾವುಲ್ಲಾ ಅವರ ಪುತ್ರ ಸೈಯದ್ ಮುಹಮ್ಮದ್ ಜೀಶಾನ್ ಅವರನ್ನು ತಪ್ಪಿತಸ್ಥರೆಂದು ಸಾಬೀತುಪಡಿಸಿ ಶಿಕ್ಷೆ ವಿಧಿಸಲಾಗಿದೆ” ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನದ ವಾಯುವ್ಯ ನಗರದ ಮರ್ದಾನ್‌ನ ನಿವಾಸಿಯಾಗಿರುವ ಜೀಶನ್‌ ಅವರಿಗೆ ಕೋರ್ಟ್ 1.2 ಮಿಲಿಯನ್ ರೂಪಾಯಿ ($4,300) ದಂಡ ಮತ್ತು ಒಟ್ಟು 23 ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಮರಣ ದಂಡನೆ ಶಿಕ್ಷೆಯನ್ನು ನೀಡಿದೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಮೈಲಿಗಲ್ಲು; 36 ಉಪಗ್ರಹಗಳ ಯಶಸ್ವಿ ಉಡಾವಣೆ

Advertisement

ಪಂಜಾಬ್ ಪ್ರಾಂತ್ಯದ ತಲಗಾಂಗ್‌ನ ನಿವಾಸಿ ಮುಹಮ್ಮದ್ ಸಯೀದ್ ಎನ್ನುವವರು ಎರಡು ವರ್ಷಗಳ ಹಿಂದೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ (ಎಫ್‌ಐಎ) ಜೀಶನ್ ವಾಟ್ಸಾಪ್ ಗುಂಪಿನಲ್ಲಿ ಧರ್ಮನಿಂದೆಯ ವಿಷಯವನ್ನು ಪೋಸ್ಟ್ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಬಳಿಕ ಆರೋಪಿಯನ್ನು ಬಂಧಿಸಿ, ಪ್ರಕರಣದ ವಿಚಾರಣೆ ಆರಂಭವಾಯಿತು ಎಂದು ವರದಿ ತಿಳಿಸಿದೆ.

ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಜೀಶನ್‌ ಅವರ ಫೋನ್‌ ವಶಪಡಿಸಿಕೊಂಡು, ಅದನ್ನು ಫೊರೆನ್ಸಿಕ್ ಪರೀಕ್ಷೆಗೆ ನೀಡಲಾಗಿತ್ತು. ಅದರಲ್ಲಿ ಜೀಶನ್‌  ತಪ್ಪಿತಸ್ಥನೆಂದು ಸಾಬೀತಾಗಿದೆ.

ಪಾಕಿಸ್ತಾನದಲ್ಲಿ ಧರ್ಮನಿಂದನೆಯ ವಿಚಾರ ತುಂಬಾ ಸೂಕ್ಷ್ಮ. ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ ಜೀಶನ್‌ ಅವರಿಗೆ ಮೇಲ್ಮನವಿ ಸಲ್ಲಿಸುವ ಹಕ್ಕಿದೆ ಎಂದು ಕೋರ್ಟ್‌ ಹೇಳಿದೆ.

ರಾಷ್ಟ್ರೀಯ ನ್ಯಾಯ ಮತ್ತು ಶಾಂತಿ ಆಯೋಗ, ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಕಾನೂನು ನೆರವು ಗುಂಪುಗಳ ಪ್ರಕಾರ ಕಳೆದ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ 774 ಮುಸ್ಲಿಮರು ಮತ್ತು ವಿವಿಧ ಅಲ್ಪಸಂಖ್ಯಾತ ಧಾರ್ಮಿಕ ಗುಂಪುಗಳ 760 ಸದಸ್ಯರು ಧರ್ಮ ನಿಂದನೆಯನ್ನು ಮಾಡಿದ ಆರೋಪವನ್ನು ಎದುರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next