ಮುಜಾಫರ್ ಗಢ್: ಮಗಳು ತನ್ನ ಇಚ್ಚೆಗೆ ವಿರುದ್ಧವಾಗಿ ಮದುವೆಯಾದಳು ಎಂಬ ಕಾರಣಕ್ಕಾಗಿ ವ್ಯಕ್ತಿಯೋರ್ವ ಕುಟುಂಬದ ಏಳು ಮಂದಿಯನ್ನು ಜೀವಂತವಾಗಿ ಸುಟ್ಟುಹಾಕಿದ ಘಟನೆ ಪಾಕಿಸ್ಥಾನದ ಮುಜಾಫರ್ ಗಢ್ ನಲ್ಲಿ ನಡೆದಿದೆ. ಈ ಮರ್ಯಾದಾ ಹತ್ಯೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳನ್ನು ಸುಟ್ಟು ಹಾಕಿದ್ದಾನೆ.
ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಮುಜಾಫರ್ ಗಢ್ ನ ಮನ್ಸೂರ್ ಹುಸೇನ್ ಎಂಬಾತನೇ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ. ಮಕ್ಕಳಾದ ಫೌಜಿಯಾ ಬಿಬಿ ಮತ್ತು ಖುರ್ಷಿದ್ ಮಾಯ್ ಅವರ ಮನೆಗಳಿಗೆ ಬೆಂಕಿ ಇಟ್ಟಿದ್ದಾನೆ. ಘಟನೆಯಲ್ಲಿ ಫೌಜಿಯಾ ಬಿಬಿಯ ಪತಿ ಮೆಹಬೂಬ್ ಅಹಮದ್ ಅವರು ಬದುಕುಳಿದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ನಾನು ಮುಲ್ತಾನ್ ಗೆ ಹೋಗಿದ್ದೆ. ಬಂದು ನೋಡುವಾಗ ಮನೆ ಹೊತ್ತಿ ಉರಿಯುತ್ತಿತ್ತು. ಮನ್ಸೂರ್ ಹುಸೇನ್ ಮತ್ತು ಸಬಿರ್ ಹುಸೇನ್ ಸ್ಥಳದಿಂದ ಪರಾರಿಯಾಗುತ್ತಿದ್ದರು ಎಂದು ಮೆಹಬೂಬ್ ಅಹಮದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಸ್ಪಷ್ಟವಾಗಿ ಹೇಳುತ್ತೇನೆ.. ನನ್ನನ್ನೂ ಯಾರೂ ಸೈಡ್ ಲೈನ್ ಮಾಡುತ್ತಿಲ್ಲ: ಯಡಿಯೂರಪ್ಪ
ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. “ಪ್ರೇಮ ವಿವಾಹದ ಬಗ್ಗೆ ಎರಡು ಕುಟುಂಬಗಳ ನಡುವಿನ ವೈರತ್ವದ ಕಾರಣದಿಂದ ಈ ಘಟನೆ ನಡೆದಿದೆ” ಎಂದು ಪೊಲೀಸ್ ಅಧಿಕಾರಿ ಅಬ್ದುಲ್ ಮಜೀದ್ ರಾಯಿಟರ್ಸ್ಗೆ ತಿಳಿಸಿದರು.
ಮೆಹಬೂಬ್ ಅಹ್ಮದ್ ಅವರು ಮತ್ತು ಫೌಜಿಯಾ ಬೀಬಿ 2020 ರಲ್ಲಿ ಪ್ರೇಮ ವಿವಾಹವಾಗಿದ್ದರು. ಇದು ಒಕ್ಕೂಟದ ವಿರುದ್ಧವಾಗಿದ್ದರಿಂದ ಮಂಜೂರ್ ಹುಸೇನ್ ಅವರ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.