ಇಸ್ಲಾಮಾಬಾದ್ : ಪಾಕಿಸ್ಥಾನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ವೇಳೆ ,ರಾಷ್ಟ್ರದ ನಾಗರಿಕರು ಮತ್ತೊಂದು ದೊಡ್ಡ ಆಘಾತವನ್ನು ಎದುರಿಸುವ ಸಾಧ್ಯತೆಯಿದ್ದು, ಫೆಬ್ರವರಿ 16 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 32 ರೂಪಾಯಿಗಳಷ್ಟು(ಪಿಕೆಆರ್) ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಸೂಚಿಸಿವೆ.
ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕಂಟ್ ಬೆಲೆಗಳು ಮತ್ತಷ್ಟು ಏರಿಕೆಯಾಗಿ ಮುಂದಿನ ಹದಿನೈದು ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಏರಿಸಲು ಸರಕಾರವನ್ನು ಒತ್ತಾಯಿಸಬಹುದು.
ವರದಿಗಳಲ್ಲಿ ಉಲ್ಲೇಖಿಸಲಾದ ಅಧಿಕೃತ ಮತ್ತು ಕೈಗಾರಿಕಾ ಮೂಲಗಳ ಪ್ರಕಾರ, ಪೆಟ್ರೋಲ್ ಬೆಲೆಗಳು ಶೇಕಡಾ 12.8 ರಷ್ಟು ಅಥವಾ 32.07 ರಷ್ಟು ಹೆಚ್ಚಾಗಬಹುದು ಎಂದು ಸೂಚಿಸಿವೆ. 250 ರೂ ಗೆ ಹೋಲಿಸಿದರೆ ಇದು ಪರಿಣಾಮಕಾರಿ ಬೆಲೆಯನ್ನು ಪ್ರತಿ ಲೀಟರ್‌ಗೆ 282 ರೂ ಗೆ ಹೆಚ್ಚಳವಾಗುತ್ತದೆ. ಅಂತೆಯೇ, 262.8 ರೂ ಗೆ ಹೋಲಿಸಿದರೆ ಡೀಸೆಲ್ ಬೆಲೆಗಳು 295.64 ಕ್ಕೆ ಏರಿಕೆಯಾಗಬಹುದು.
ನಗದು ಕೊರತೆಯಿರುವ ರಾಷ್ಟ್ರದ ನಾಗರಿಕರು ಪ್ರಸ್ತುತ ಪ್ರತಿ ಲೀಟರ್‌ಗೆ 210 ರೂ ನೀಡಿ ಹಾಲನ್ನು ಖರೀದಿಸುತ್ತಿದ್ದಾರೆ ಎಂದು ವರದಿಯಾಗಿದೆ, ಆದರೆ ಒಂದು ಕೆಜಿ ಕೋಳಿ ಮಾಂಸಕ್ಕೆ 700-800 ರೂ., ಮೂಳೆಗಳಿಲ್ಲದ ಮಾಂಸದ ಬೆಲೆ ಈಗ ಪ್ರತಿ ಕಿಲೋಗೆ 1,000-1,100 ಕ್ಕೆ ತಲುಪಿದೆ.
ಪಾಕಿಸ್ಥಾನದ 1 ರೂಪಾಯಿ(ಪಿಕೆಆರ್) ಮೌಲ್ಯ ಭಾರತದಲ್ಲಿ 31 ಪೈಸೆಯಾಗಿದೆ.