ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅಲ್ಲಿನ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ)ನ ಹಿರಿಯ ಅಧಿಕಾರಿಗಳು ಸಿಡಿದು ಬಿದ್ದಿದ್ದಾರೆ.
ಖಾನ್ ಅಧಿಕಾರದಲ್ಲಿ ಇರುವ ವೇಳೆ, ಅವರ ಸರ್ಕಾರಕ್ಕೆ ಕಾನೂನು ಮತ್ತು ಸಂವಿಧಾನ ಬಾಹಿರ ರೀತಿಯಲ್ಲಿ ಬೆಂಬಲ ನೀಡುವ ಬಗ್ಗೆ ಕೋರಿಕೆ ಸಲ್ಲಿಸಿದ್ದರು ಎಂದು ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಲೆ.ಜ.ನದೀಮ್ ಅಂಜುಂ ಆರೋಪ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಮುಖ್ಯಸ್ಥರು ಸೇನೆಯ ಮಾಧ್ಯಮ ವಿಭಾಗದ ಜತೆಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಲಾಹೋರ್‌ನಿಂದ ಇಸ್ಲಾಮಾಬಾದ್ ವರೆಗೆ ಕೈಗೊಳ್ಳಲಿರುವ ಪಾದಯಾತ್ರೆಗೆ ಮುನ್ನ ಈ ಬೆಳವಣಿಗೆ ನಡೆದಿದೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಖಾನ್ ಅವರು ಮಂಡಿಸಿದ್ದ ಅಸಾಂವಿಧಾನಿಕ ಕೋರಿಕೆಗಳು ಏನು ಎಂಬ ವಿಚಾರವನ್ನು ಐಎಸ್‌ಐ ಮುಖ್ಯಸ್ಥರು ಬಹಿರಂಗಪಡಿಸಲಿಲ್ಲ. ಗಮನಾರ್ಹ ಅಂಶವೆಂದರೆ ಮಾಧ್ಯಮದವರ ಜತೆಗೆ ಮಾತನಾಡುವ ವೇಳೆ, ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ದೂರ ಉಳಿಯುವ ನಿರ್ಧಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಜತೆಗೆ ಕೆಲವೊಂದು ತಪ್ಪುಗಳನ್ನೂ ಮಾಡಿತ್ತು ಎಂದು ಐಎಸ್‌ಐ ಮುಖ್ಯಸ್ಥ ಲೆ.ಜ.ನದೀಮ್ ಅಂಜುಂ ಹೇಳಿದ್ದಾರೆ.
ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ನಾಯಕ ಅಸಾದ್ ಉಮರ್ ಪ್ರತಿಕ್ರಿಯೆ ನೀಡಿ, ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ವೇಳೆ ಅಸಾಂವಿಧಾನಿಕ ಕೋರಿಕೆ ಮಂಡಿಸಿರಲಿಲ್ಲ ಎಂದಿದ್ದಾರೆ.