ಪಾಕಿಸ್ಥಾನವು ತನ್ನ ಕಣ್ಗಾವಲು ಪಟ್ಟಿಯಿಂದ ಸದ್ದಿಲ್ಲದೇ 4 ಸಾವಿರಕ್ಕೂ ಅಧಿಕ ಉಗ್ರರ ಹೆಸರನ್ನು ಕೈಬಿಟ್ಟಿದೆ ಎಂಬ ಆಘಾತಕಾರಿ ಸುದ್ದಿಯನ್ನು ಹೊರಹಾಕಿದೆ ನ್ಯೂಯಾರ್ಕ್ ಮೂಲಕ ಕ್ಯಾಸ್ಟೇಲಿಯಂ. ಎಐ ಎಂಬ ಸಂಸ್ಥೆ. ಗಮನಾರ್ಹ ಸಂಗತಿಯೆಂದರೆ, ಮಾರ್ಚ್ ತಿಂಗಳ ಆರಂಭದಿಂದ ಒಟ್ಟು 1,800 ಹೆಸರನ್ನು ಉಗ್ರರ ಪಟ್ಟಿಯಿಂದ ತೆಗೆದುಹಾಕಲಾಗಿದ್ದು(ಕೋವಿಡ್ ಹಾವಳಿ ಅಧಿಕವಾದ ಸಮಯದಲ್ಲಿ), ಇದರಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕಿ-ಉರ್-ರೆಹ್ಮಾನ್ ಲಕ್ವಿಯ ಹೆಸರೂ ಇದೆ. ಕೆಲ ತಿಂಗಳ ಹಿಂದಷ್ಟೇ ಪಾಕಿಸ್ಥಾನ ಎಫ್ಎಟಿಎಫ್ನ ಕಪ್ಪುಪಟ್ಟಿಯ ಕುಣಿಕೆಯಿಂದ ಬಚಾವಾಗಿತ್ತು. ಈಗದು ಕೊರೊನಾ ಹಾವಳಿಯ ವೇಳೆ ಕಳ್ಳದಾರಿ ಹುಡುಕಿಕೊಂಡಿದೆ.
ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಹಾಗೂ ಉಗ್ರವಾದಿ ಚಟುವಟಿಕೆಗಳಿಗೆ ಅಕ್ರಮ ಹಣ ವರ್ಗಾವಣೆ ಜಾಲ ತಡೆಯುವ ನಿಟ್ಟಿನಲ್ಲಿ ಹಣಕಾಸು ಕ್ರಿಯಾಪಡೆ(ಎಫ್ಎಟಿಎಫ್) ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಂದು ದೇಶವೂ ಈ ಸಂಸ್ಥೆಗೆ ಉಗ್ರರ ಪಟ್ಟಿಯನ್ನು ನೀಡಬೇಕು. 2018ರಲ್ಲಿ ಪಾಕಿಸ್ಥಾನದ ಪಟ್ಟಿಯಲ್ಲಿ 7,600 ಉಗ್ರರ ಹೆಸರಿತ್ತು. ಹೀಗಾಗಿ, ಅದು ಕಪ್ಪುಪಟ್ಟಿಗೆ ಬೀಳುವ ಅಪಾಯವನ್ನು ಎದುರಿಸುತ್ತಲೇ ಬಂದಿತ್ತು.
ಒಂದು ವೇಳೆ ಪಾಕಿಸ್ಥಾನವೇನಾದರೂ ಕಪ್ಪುಪಟ್ಟಿಗೆ ಸೇರಿತೆಂದರೆ, ಅದಕ್ಕೆ ಬರುವ ಅಂತಾರಾಷ್ಟ್ರೀಯ ಸಹಾಯ ಅಜಮಾಸು ನಿಂತೇ ಹೋಗುತ್ತದೆ. ಅಷ್ಟೇ ಅಲ್ಲ, ಕಪ್ಪುಪಟ್ಟಿಗೆ ಸೇರಿದ ರಾಷ್ಟ್ರವೊಂದರಲ್ಲಿ ಹೂಡಿಕೆ ಮಾಡುವ ದೇಶಗಳು, ಕಂಪನಿಗಳು ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ. ಸಹಜವಾಗಿಯೇ, ಕಪ್ಪು ಪಟ್ಟಿಗೆ ಸೇರಿದ ರಾಷ್ಟ್ರವೊಂದರ ಅರ್ಥ ವ್ಯವಸ್ಥೆ ದುಸ್ಥಿತಿಗೆ ತಲುಪುತ್ತದೆ. ಇದುವರೆಗೆ ಚೀನ, ಮಲೇಷ್ಯಾ ಮತ್ತು ಟರ್ಕಿಯ ಬೆಂಬಲದಿಂದ ಪಾಕಿಸ್ಥಾನಬೂದು ಪಟ್ಟಿಯಲ್ಲೇ ಉಳಿಯುವಂತಾಗಿದೆ. ಈಗ ಅಂತಾರಾಷ್ಟ್ರೀಯ ಸಮುದಾಯದ ಗಮನ ಮತ್ತು ಶಕ್ತಿಯೆಲ್ಲವೂ ಕೊರೊನಾ ವಿರುದ್ಧದ ಹೋರಾಟಕ್ಕೆ ಹೆಚ್ಚಾಗಿ ಕೇಂದ್ರಿತವಾಗಿರುವುದರಿಂದಾಗಿ, ಪಾಕಿಸ್ಥಾನವೀಗ ಉಗ್ರರ ಪಟ್ಟಿಯನ್ನು ಕಿರಿದಾಗಿಸುವ ಕುತಂತ್ರಕ್ಕೆ ಮೊರೆ ಹೋಗಿದೆ.
ಗಮನಿಸಬೇಕಾದ ಸಂಗತಿಯೆಂದರೆ, ಈಗ ಪಾಕಿಸ್ಥಾನದಲ್ಲೂ ಕೂಡ ಸೋಂಕಿತರ ಸಂಖ್ಯೆ 10 ಸಾವಿರ ತಲುಪುತ್ತಿದೆ, ಅಜಮಾಸು 200 ಜನ ಮೃತಪಟ್ಟಿದ್ದಾರೆ, ಮರಳುಗಾಡಿನ ಮಿಡತೆಗಳ ಕಾಟದಿಂದ ಮೊದಲೇ ಹೈರಾಣಾಗಿದ್ದ ಅದರ ಕೃಷಿ ಕ್ಷೇತ್ರವು ಈಗಂತೂ ನೆಲ ಕಚ್ಚಿದೆ, ನಿರುದ್ಯೋಗ ಸಮಸ್ಯೆ ವಿಪರೀತವಾಗಿದೆ. ಅದರ ಆಪ್ತ ಮಿತ್ರ ಚೀನಕ್ಕೂ ಕೂಡ ಈಗ ಪಾಕಿಸ್ಥಾನದತ್ತ ಹೆಚ್ಚು ಗಮನ ಕೊಡಲು ಆಗುತ್ತಿಲ್ಲ. ಹೀಗಾಗಿ, ಪಾಕ್‌ನ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇಂಥ ದುಸ್ಥಿತಿಯಲ್ಲೂ ಅದು ತನ್ನ ಕಪಟತನವನ್ನು ಬಿಡುತ್ತಿಲ್ಲ ಎನ್ನುವುದನ್ನು ಗಮನಿಸಬೇಕು. ಕಳೆದ ಒಂದು ತಿಂಗಳಿಂದ ಭಾರತದೊಳಗೆ ಉಗ್ರರನ್ನು ನುಗ್ಗಿಸಲು ಅದು ಪ್ರಯತ್ನಿಸುತ್ತಲೇ ಇದೆ. ಇಂಥದ್ದೇ ಒಂದು ಸಂದರ್ಭದಲ್ಲಿ ನಮ್ಮ ಐವರು ಯೋಧರು ಕಾರ್ಯಾಚರಣೆ ವೇಳೆ ವೀರಮರಣವಪ್ಪಿದ್ದಾರೆ. ನಿತ್ಯ ಗಡಿಯಾಚೆಗಿಂದ ಅಪ್ರಚೋದಿತ ದಾಳಿಗಳು ವರದಿಯಾಗುತ್ತಲೇ ಇವೆ. ಬಹುಶಃ ತನ್ನ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಮ್ರಾನ್ ಸರಕಾರ ಹಾಗೂ ಪಾಕ್ ಸೇನೆ ಈ ರೀತಿ ಮಾಡುತ್ತಿರಬಹುದು. ಇಡೀ ಪ್ರಪಂಚ ಕೊರೊನಾ ವಿರುದ್ಧ ಗೆಲುವು ಸಾಧಿಸಲು ತಲೆಕೆಡಿಸಿಕೊಂಡಿರುವಾಗ, ಪಾಕಿಸ್ಥಾನ, ತನ್ನಲ್ಲಿನ ಉಗ್ರರಿಗೆ ಸಹಾಯ ಮಾಡಲು ಯೋಚಿಸುತ್ತಿರುವುದು ಅದರ ಕರಾಳ ಮುಖಕ್ಕೆ ಹಿಡಿದ ಕನ್ನಡಿ. ಆದರೆ, ಯಾವುದೇ ಕಾರಣಕ್ಕೂ ಪಾಕ್ ಶಿಕ್ಷೆಯಿಂದ ನುಣುಚಿಕೊಳ್ಳುವಂತಾಗಬಾರದು. ಈ ವಿಚಾರವನ್ನು ಭಾರತವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಟ್ಟಿಯಾಗಿ ಪ್ರಶ್ನಿಸಲೇಬೇಕಿದೆ.