ನವದೆಹಲಿ: ಇತ್ತೀಚೆಗೆ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಹತ್ಯೆಗೈಯಲು ಪಾಕಿಸ್ತಾನದಿಂದ ನುಸುಳುಕೋರರು ಭಾರತಕ್ಕೆ ಆಗಮಿಸಿರುವ ವಿಷಯ ಬಹಿರಂಗವಾಗಿದೆ..
ಇದನ್ನೂ ಓದಿ:ಸೆಲ್ಫಿ ಹುಚ್ಚಿಗೆ ನೀರು ಪಾಲಾದ ಯುವಕರು : ಓರ್ವನ ದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧಕಾರ್ಯ
ರಾಜಸ್ಥಾನದ ಗಂಗಾನಗರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಸಮೀಪ ಭದ್ರತಾ ಪಡೆಯ ಸಿಬ್ಬಂದಿಗಳು 24 ವರ್ಷದ ಪಾಕಿಸ್ತಾನಿ ಪ್ರಜೆಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಈತನನ್ನು ರಿಜ್ವಾನ್ ಅಶ್ರಫ್ ಎಂದು ಗುರುತಿಸಲಾಗಿದೆ.
ಹಿಂದುಮಲ್ಕೋಟ್ ಸೆಕ್ಟರ್ ನ ಖಾಖನ್ ಚೆಕ್ ಪೋಸ್ಟ್ ಮೂಲಕ ಭಾರತದ ಗಡಿಯೊಳಗೆ ಪ್ರವೇಶಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೀಗ ಪಾಕಿಸ್ತಾನ ಪಂಜಾಬ್ ನ ಮಂಡಿ ಬಹೌದ್ದೀನ್ ನಿವಾಸಿ ಅಶ್ರಫ್ ವಿಚಾರಣೆ ವೇಳೆ ಆಘಾತಕಾರಿ ವಿಷಯಗಳನ್ನು ಬಹಿರಂಗಗೊಳಿಸುತ್ತಿರುವುದಾಗಿ ವರದಿ ವಿವರಿಸಿದೆ.
ಗಡಿಯಿಂದ ನುಸುಳಿ ಭಾರತಕ್ಕೆ ಪ್ರವೇಶಿಸಬೇಕೆಂಬ ಅಶ್ರಫ್ ಉದ್ದೇಶ ತುಂಬಾ ಅಪಾಯಕಾರಿಯಾಗಿತ್ತು. ಮಾಧ್ಯಮಗಳ ವರದಿ ಪ್ರಕಾರ, ಬಿಜೆಪಿಯಿಂದ ಅಮಾನತುಗೊಂಡಿದ್ದ ನೂಪುರ್ ಶರ್ಮಾ ಹತ್ಯೆಗಾಗಿ ಗಡಿ ನುಸುಳಿ ಬಂದಿರುವುದಾಗಿ ಅಶ್ರಫ್ ಬಿಎಸ್ ಎಫ್ ತನಿಖೆಯ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ಹೇಳಿದೆ.
ಗಂಗಾನಗರ್ ನಿಂದ ಅಜ್ಮೀರ್ ದರ್ಗಾಕ್ಕೆ ತೆರಳಿ ಚಾದರ್ ಸೇವೆಯನ್ನು ನೀಡಬೇಕೆಂದು ಇಚ್ಛಿಸಿದ್ದು, ಇದರ ಜತೆಗೆ ನೂಪುರ್ ಶರ್ಮಾ ಅವರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದ ಎಂದು ವರದಿ ತಿಳಿಸಿದೆ.