ಇಸ್ಲಮಾಬಾದ್: ನೆರೆ ರಾಷ್ಟ್ರ ಪಾಕಿಸ್ಥಾನವು ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಆರೋಗ್ಯ ಕ್ಷೇತದ ಮೇಲೂ ಅಡ್ಡಪರಿಣಾಮ ಬಿದ್ದಿದೆ. ದೇಶದಲ್ಲಿ ಫಾರೆಕ್ಸ್ ಮೀಸಲು ಕೊರತೆಯು ಅಗತ್ಯವಿರುವ ಔಷಧಿಗಳನ್ನು ಅಥವಾ ದೇಶೀಯ ಉತ್ಪಾದನೆಯಲ್ಲಿ ಬಳಸುವ ಸಕ್ರಿಯ ಔಷಧೀಯ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಪಾಕಿಸ್ತಾನದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ.
ಇದರ ಪರಿಣಾಮವಾಗಿ, ಆಸ್ಪತ್ರೆಗಳಲ್ಲಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಕೊರತೆಯಿಂದಾಗಿ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿಲ್ಲ ಎನ್ನುತ್ತಿದೆ ವರದಿ. ಪಾಕಿಸ್ಥಾನದಲ್ಲಿ ಪಾಮಡೊಲ್, ಇನ್ಸುಲಿನ್, ಡಿಸ್ಪ್ರಿನ್, ರಿವೋಟ್ರಿಲ್ ಮುಂತಾದ ಔಷಧಗಳು ಜನರಿಗೆ ಲಭ್ಯವಾಗುತ್ತಿಲ್ಲ.
ವರದಿಯ ಪ್ರಕಾರ ಪಾಕಿಸ್ಥಾನದಲ್ಲಿ ಹೃದಯ, ಕ್ಯಾನ್ಸರ್, ಕಿಡ್ನಿ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಲಕರಣೆಗಳು ಕೆಲವೇ ಕೆಲವು ಮಾತ್ರ ಲಭ್ಯವಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಕೆಲಸ ಕಳೆದುಕೊಳ್ಳಬಹುದು ಎನ್ನಲಾಗಿದೆ.
ವಾಣಿಜ್ಯ ಬ್ಯಾಂಕ್ ಗಳು ತಮ್ಮ ಆಮದುಗಳಿಗೆ ಹೊಸ ಲೆಟರ್ ಆಫ್ ಕ್ರೆಡಿಟ್ (ಎಲ್‌ಸಿ)ಗಳನ್ನು ನೀಡುತ್ತಿಲ್ಲ ಎಂದು ಹೇಳುವ ಮೂಲಕ ಔಷಧ ತಯಾರಕರು ಆರೋಗ್ಯ ವ್ಯವಸ್ಥೆಯಲ್ಲಿನ ಬಿಕ್ಕಟ್ಟಿಗೆ ಹಣಕಾಸು ವ್ಯವಸ್ಥೆಯನ್ನು ದೂಷಿಸುತ್ತಿದ್ದಾರೆ.
ಹೆಚ್ಚುತ್ತಿರುವ ಇಂಧನ ವೆಚ್ಚ ಮತ್ತು ಸಾರಿಗೆ ಶುಲ್ಕಗಳು ಮತ್ತು ಪಾಕಿಸ್ತಾನಿ ರೂಪಾಯಿಯ ತೀವ್ರ ಅಪಮೌಲ್ಯದಿಂದಾಗಿ ಔಷಧಗಳ ತಯಾರಿಕೆಯ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ ಎಂದು ಔಷಧ ಉತ್ಪಾದನಾ ಉದ್ಯಮವು ಹೇಳಿದೆ.