ಇಸ್ಲಾಮಾಬಾದ್ : ‘ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಪಾಕಿಸ್ಥಾನ ಶಾಮೀಲಾಗಿಲ್ಲ’ ಎಂದು ಇಂದು ಮಂಗಳವಾರ ಹೇಳುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.
‘ಭಾರತ ಒಂದೊಮ್ಮೆ ನಮ್ಮ ದೇಶದ ಮೇಲೆ ದಾಳಿ ಮಾಡಿದರೆ ನಾವೂ ಪ್ರತಿ ದಾಳಿ ನಡೆಸುತ್ತೇವೆ’ ಎಂದು ಹೇಳುವ ಮೂಲಕ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಗೆ 40 ಭಾರತೀಯ ಯೋಧರು ಬಲಿಯಾದುದಕ್ಕೆ ಇಮ್ರಾನ್ ಖಾನ್ ಯಾವುದೇ ಪಶ್ಚಾತ್ತಾಪ ಪ್ರಕಟಿಸಿಲ್ಲ.
‘ಪುಲ್ವಾಮಾ ದಾಳಿಯ ಬಗ್ಗೆ ನಾನು ಈ ತನಕ ಏನೂ ಮಾತಾಡಿರಲಿಲ್ಲ; ಏಕೆಂದರೆ ಸೌದಿ ಅರೇಬಿಯದ ರಾಜಕುಮಾರ ನಮ್ಮ ದೇಶಕ್ಕೆ ಬಂದಿದ್ದರು. ಆ ವಿಷಯದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡುವಲ್ಲಿ ನಾವು ವ್ಯಸ್ತರಾಗಿದ್ದೆವು. ಈಗ ಅವರ ನಿರ್ಗಮನದ ಬಳಿಕ ನಾನು ಮಾತನಾಡುತ್ತಿದ್ದೇನೆ. ಪುಲ್ವಾಮಾದಂತಹ ದಾಳಿಗೆ ನೆರವಾಗುವ ಮೂಲಕ ಸೌದಿ ಪ್ರಿನ್ಸ್ ಭೇಟಿಯನ್ನು ಹಾಳುಗೆಡಹಲು ನಾವು ಬಯಸಿರಲಿಲ್ಲ; ಮಾತ್ರವಲ್ಲ ಇಂತಹ ದಾಳಿಯಿಂದ ನಮಗೆ ಆಗಬೇಕಾದದ್ದು ಏನೂ ಇಲ್ಲ’ ಎಂದು ಇಮ್ರಾನ್ ಹೇಳಿದರು.
“ನಾನು ಭಾರತ ಸರಕಾರವನ್ನು ಕೇಳುವುದಿಷ್ಟೇ : ಕಾಶ್ಮೀರದಲ್ಲಿ ಏನೇ ನಡೆದರೂ ನೀವು ಪಾಕಿಸ್ಥಾನವನ್ನು ದೂರುವುದಾದರೆ, ನೀವು ಪಾಕಿಸ್ಥಾನವನ್ನು ಕೊರಡೆ ಏಟು ತಿನ್ನುವ ಹುಡುಗನನ್ನಾಗಿ ಮಾಡುವಿರಿ. ನೀವು ನಮ್ಮ ಮೇಲೆ ದಾಳಿ ಮಾಡುವಾಗ ನಾವು ಪ್ರತಿ ದಾಳಿ ಮಾಡುವುದಿಲ್ಲ ಎಂದು ನೀವು ಭಾವಿಸಿದರೆ ಅದು ತಪ್ಪು; ನಾವು ಪ್ರತಿ ದಾಳಿ ಮಾಡಿಯೇ ತೀರುತ್ತೇವೆ’ ಎಂದು ಇಮ್ರಾನ್ ಹೇಳಿದರು.
‘ಪುಲ್ವಾಮಾ ದಾಳಿಯ ಬಗ್ಗೆ ನೀವು ನಮಗೆ ಸೂಕ್ತ ಪುರಾವೆ ಕೊಟ್ಟಲ್ಲಿ ನಾವು ತನಿಖೆಗೆ ಖಂಡಿತಾ ನೆರವಾಗುತ್ತೇವೆ ಎಂಬ ಭರವಸೆಯನ್ನು ನಾನು ನಿಮಗೆ ಕೊಡುತ್ತೇನೆ; ನಮ್ಮ ನೆಲವನ್ನು ಯಾರಾದೂರ ಉಗ್ರ ಚಟುವಟಿಕೆಗಳಿಗೆ ಬಳಸುತ್ತಾರೆ ಎಂದಾದರೆ ಅದು ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ನಾವು ಕ್ರಮ ತೆಗೆದುಕೊಳ್ಳಲು ಸಿದ್ಧರಿದ್ದೇವೆ; ಉಗ್ರ ನಿಗ್ರಹ ಬಗೆಗಿನ ಮಾತುಕತೆಗೂ ನಾವು ಸಿದ್ಧರಿದ್ದೇವೆ’ ಎಂದು ಇಮ್ರಾನ್ ಹೇಳಿದರು.