ಹೊಸದಿಲ್ಲಿ : ಮೂರು ವರ್ಷಗಳ ಹಿಂದೆ ಭಾರತೀಯ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ ಹಿಜ್‌ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಯನ್ನು ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಇಂದು ಸೋಮವಾರ ಮಾಡಿರುವ ಟ್ವೀಟ್ ನಲ್ಲಿ ‘ಹೀರೋ’ ಎಂದು ಕರೆದು, ಹಾಡಿ ಹೊಗಳಿದ್ದಾರೆ.
ಪಾಕಿಸ್ಥಾನ ಈಗಲೂ ಉಗ್ರರಿಗೆ ರಕ್ಷಣೆ ನೀಡುತ್ತಿದೆ ಮತ್ತು ಭಾರತ ವಿರುದ್ಧದ ಭಯೋತ್ಪಾದನೆಗೆ ಪ್ರೋತ್ಸಾಹ, ಬೆಂಬಲ ನೀಡುತ್ತಿದೆ ಎಂಬುದಕ್ಕೆ ಸಿಕ್ಕಿರುವ ತಾಜಾ ಉದಾಹರಣೆ ಇದಾಗಿದೆ.
“ಬದ್ಧತೆ, ಸಮರ್ಪಣೆ ಮತ್ತು ತ್ಯಾಗವಿಲ್ಲದೆ ಏನೂ ಆಗದು; ಮುಂದಿನ ತಲೆಮಾರುಗಳಿಗೆ ಉತ್ತಮ ನಾಳೆಗಳನ್ನು ಕೊಡುವುದಕ್ಕಾಗಿ ಹೀರೋಗಳು ಇಂದು ತಮ್ಮ ಜೀವವನ್ನು ತ್ಯಾಗಮಾಡುತ್ತಾರೆ’ ಎಂದು ಮೇಜರ್ ಜನರಲ್ ಗಫೂರ್ ತನ್ನ ಟ್ವೀಟ್‌ನಲ್ಲಿ ಬರೆದಿದ್ದಾರೆ ಮತ್ತು ಬುರ್ಹಾನ್ ವಾನಿ ಒಬ್ಬ ನೈಜ ಹೀರೋ ಎಂದು ಕರೆದಿದ್ದಾರೆ.
2017ರಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಹತ ಹಿಜ್‌ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯನ್ನು ಹಾಡಿ ಹೊಗಳಿ “ಆತನ ಸಾವು ಕಾಶ್ಮೀರ ಕಣಿವೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ಫೂರ್ತಿಯನ್ನು ತುಂಬಿದೆ’ ಎಂದು ಹೇಳಿದ್ದರು.
ಬುರ್ಹಾನ್ ವಾನಿಯ ಸಾವಿನ ಮೂರನೇ ವರ್ಷಾಚರಣೆ ಪ್ರಯುಕ್ತ ಇಂದು ಪ್ರತ್ಯೇಕತಾವಾದಿಗಳು ಜಮ್ಮು ಕಾಶ್ಮೀರದಲ್ಲಿ ಪೂರ್ಣ ಬಂದ್ ಗೆ ಕರೆ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ, ಯಾವುದೇ ಹಿಂಸೆ ನಡೆಯುವುದನ್ನು ತಪ್ಪಿಸಲು, ಭದ್ರತಾ ಪಡೆಗಳು ಹಿರಿಯ ಪ್ರತ್ಯೇಕತಾವಾದಿ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿದ್ದರು.
ಹುರಿಯತ್ ಸೌಮ್ಯವಾದಿ ಬಣದ ಅಧ್ಯಕ್ಷ ಮೀರ್ವೆಜ್ ಫಾರೂಕ್, ತೆಹರೀಕ್ ಹುರಿಯತ್ ಅಧ್ಯಕ್ಷ ಸೈಯದ್ ಅಲಿ ಶಾ ಗೀಲಾನಿ, ಪ್ರತ್ಯೇಕತಾವಾದಿ ನಾಯಕ ಹಿಲಾಲ್ ವಾರ್ ಗೃಹ ಬಂಧನದಲ್ಲಿರುವ ಪ್ರಮುಖರು ಎಂದು ವರದಿಗಳು ತಿಳಿಸಿವೆ.