Advertisement
ಹಣಕಾಸು ಕ್ರಿಯಾ ಪಡೆಯ (ಎಫ್ಎಟಿಎಫ್) ಕಪ್ಪುಪಟ್ಟಿಗೆ ಸೇರುವುದರಿಂದ ಪಾಕಿ ಸ್ತಾನ ಸ್ವಲ್ಪದರಲ್ಲಿಯೇ ಪಾರಾಗಿದೆ. ಮಂಗಳವಾರ ನಡೆದ ಎಫ್ಎಟಿಎಫ್ ಸಭೆಯಲ್ಲಿ ಪಾಕಿ ಸ್ತಾನಕ್ಕೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಿನ ಫೆಬ್ರವರಿ ತನಕ ಸಮಯಾವಕಾಶ ನೀಡಲಾಗಿದೆ. ಅಷ್ಟರತನಕ ಪಾಕ್ ಎಫ್ಎಟಿಎಫ್ನ ಕಂದುಪಟ್ಟಿಯಲ್ಲಿಯೇ ಮುಂದುವರಿಯಲಿದೆ.
Related Articles
Advertisement
ಉಗ್ರರಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗುವುದನ್ನು ತಡೆಯಲು ಎಫ್ಎಟಿಎಫ್ ವಿಧಿಸಿರುವ 30 ಷರತ್ತುಗಳಲ್ಲಿ ಕೆಲವನ್ನು ಮಾತ್ರ ಪಾಕ್ ಈಡೇರಿಸಿದೆ. ಜಾಗತಿಕ ಉಗ್ರರೆಂದು ಘೋಷಿಸಲ್ಪಟ್ಟಿರುವವರು ಅಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಹಾಗೂ ಸಭೆ, ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಅವರ ಈ ಎಲ್ಲ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎನ್ನುವುದು ರಹಸ್ಯ ವಿಚಾರವೇನಲ್ಲ. ಆದರೆ ಇದನ್ನು ತಡೆಯಲು ಪಾಕ್ ಸರಕಾರ ಯಾವ ಸದೃಢವಾದ ಕ್ರಮಗಳನ್ನೂ ಕೈಗೊಂಡಿಲ್ಲ. ಬದಲಾಗಿ ಪಾಕ್ ಸೇನೆ ಮತ್ತು ಗುಪ್ತಚರ ಪಡೆ ಐಎಸ್‌ಐ ನೇರವಾಗಿಯೇ ಉಗ್ರರ ಜೊತೆಗೆ ಸಂಪರ್ಕದಲ್ಲಿದೆ. ಇಂಥ ದೇಶವನ್ನು ಆದಷ್ಟು ಬೇಗ ಕಪ್ಪುಪಟ್ಟಿಗೆ ಸೇರಿಸಿ ಆರ್ಥಿಕವಾಗಿಯೂ ಏಕಾಂಗಿಯಾಗಿಸುವ ಅಗತ್ಯವಿದೆ.
ಎಪ್‌ಎಟಿಎಫ್ನ ಕಪ್ಪುಪಟ್ಟಿಗೆ ಸೇರಿದರೆ ಪಾಕಿಗೆ ಸಿಗುವ ಅಂತಾರಾಷ್ಟ್ರೀಯ ಹಣಕಾಸು ನೆರವು ಸ್ಥಗಿತವಾಗುತ್ತದೆ. ಐಎಂಎಫ್ನಿಂದಲೂ ಯಾವ ನೆರವೂ ಸಿಗುವುದಿಲ್ಲ. ಐಎಂಎಫ್ನ 6 ಶತಕೋಟಿ ಡಾಲರ್ ಸಾಲಕ್ಕೆ ತಡೆ ಬೀಳುತ್ತದೆ. ಯಾವ ದೇಶವೂ ಅಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲದಂಥ ವಾತಾವರಣ ಸೃಷ್ಟಿಯಾಗುತ್ತದೆ. ಈಗಾಗಲೇ ಆರ್ಥಿಕವಾಗಿ ಕಂಗಾಲು ಸ್ಥಿತಿಯಲ್ಲಿರುವ ಪಾಕಿಗೆ ಈ ಹೊಡೆತ ಮಾರಕವಾಗುತ್ತಿತ್ತು.
ಉಗ್ರವಾದವನ್ನೇ ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿರುವ, ನೆರೆ ರಾಷ್ಟ್ರದ ವಿಚಾರದಲ್ಲಿ ವಿನಾಕಾರಣ ಮೂಗುತೂರಿಸುತ್ತಾ, ಉಗ್ರರನ್ನು ಛೂ ಬಿಟ್ಟು ರಕ್ತದೋಕುಳಿ ಹರಿಸುತ್ತಿರುವ ದೇಶದ ವಿರುದ್ಧ ಈ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇದರಿಂದ ಭಾರತ ಮಾತ್ರವಲ್ಲದೆ ಒಟ್ಟಾರೆಯಾಗಿ ಜಾಗತಿಕ ಶಾಂತಿಗೆ ಒಳಿತಾಗುತ್ತಿತ್ತು. ಅಫ್ಘಾನಿಸ್ಥಾನ, ಭಾರತ ಸೇರಿದಂತೆ ಏಶ್ಯಾದಲ್ಲಿ ಹಾಗೂ ಒಟ್ಟಾರೆಯಾಗಿ ವಿಶ್ವದಲ್ಲಿ ಶಾಂತಿ ನೆಲೆಯಾಗಬೇಕಾದರೆ ಪಾಕಿನಲ್ಲಿರುವ ಉಗ್ರ ಕಾರ್ಖಾನೆಗಳು ಮುಚ್ಚಲೇಬೇಕು.