ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೆಂದೂ ಕಂಡು, ಕೇಳರಿಯದ ಪ್ರಮಾಣದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಪ್ರವಾಹದಿಂದಾಗಿ ಸುಮಾರು 2 ಲಕ್ಷಕ್ಕೂ ಅಧಿಕ ಮನೆಗಳು ನಾಶವಾಗಿದೆ. ಈವರೆಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಿಸ್ ದಿವಾ ಯೂನಿವರ್ಸ್- 2022 ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಬ್ಯೂಟಿ ದಿವಿತಾ ರೈ
ಭಾರೀ ಮಳೆ, ಪ್ರವಾಹದಿಂದಾಗಿ ದೇಶದಲ್ಲಿ 5,7 ಮಿಲಿಯನ್ ಗಿಂತಲೂ ಅಧಿಕ ಜನರು ತೊಂದರೆಗೊಳಗಾಗಿದ್ದಾರೆ. ದ ನ್ಯೂಸ್ ಇಂಟರ್ ನ್ಯಾಶನಲ್ ವರದಿ ಪ್ರಕಾರ, ಜನರನ್ನು ರಕ್ಷಿಸುವ ಮತ್ತು ನಿರಾಶ್ರಿತ ಶಿಬಿರಕ್ಕೆ ಕಳುಹಿಸುವ ಕಾರ್ಯ ಮುಂದುವರಿದಿದೆ ಎಂದು ವಿವರಿಸಿದೆ.
ಭಾರೀ ಮಳೆಯಿಂದಾಗಿ ದೇಶದಲ್ಲಿನ ಬೆಳೆ, ಮನೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ನೆರವು ನೀಡುವಂತೆ ಪಾಕಿಸ್ತಾನ ಸರ್ಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಕೃಷಿ ಭೂಮಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಅಲ್ಲದೇ ದೇಶಾದ್ಯಂತ 9,49,858 ಮನೆಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಪ್ರವಾಹದಿಂದಾಗಿ ಜೂನ್ 14ರಿಂದ ಈವರೆಗೆ 1,033 ಮಂದಿ ಸಾವನ್ನಪ್ಪಿದ್ದು, ಸುಮಾರು 1,527 ಜನರು ಗಾಯಗೊಂಡಿದ್ದಾರೆ. ಭಾರೀ ಮಳೆ, ಪ್ರವಾಹದಿಂದಾಗಿ ಪಾಕ್ ನಲ್ಲಿ 9,49,858 ಮನೆಗಳು ಹಾನಿಗೊಳಗಾಗಿದ್ದು, ಇದರಲ್ಲಿ 6,62,446 ಮನೆಗಳು ಭಾಗಶಃ ಹಾನಿಗೊಂಡಿದ್ದು, 2,87,412 ಮನೆಗಳು ಸಂಪೂರ್ಣ ನಾಶಗೊಂಡಿರುವುದಾಗಿ ವರದಿ ತಿಳಿಸಿದೆ.