ವಾಷಿಂಗ್ಟನ್: ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ಥಾನ ಸರಕಾರ, ಸರ್ಬಿಯಾದಲ್ಲಿರುವ ಪಾಕಿಸ್ಥಾನ ರಾಯಭಾರ ಕಚೇರಿಯ ಸಿಬಂದಿಗೆ ಮೂರು ತಿಂಗಳುಗಳಿಂದ ವೇತನ ಪಾವತಿಸಿಲ್ಲ ಎಂಬ ವರದಿಗಳು ಹರಿದಾಡಿದ್ದವು. ಅದರ ಬೆನ್ನಿಗೇ, ಈಗ ವಾಷಿಂಗ್ಟನ್‌ನಲ್ಲಿರುವ ಪಾಕಿಸ್ಥಾನ ರಾಯಭಾರ ಕಚೇರಿಯಲ್ಲಿನ ಸಿಬಂದಿಗೂ ಕಳೆದ ನಾಲ್ಕು ತಿಂಗಳು ಗಳಿಂದ ವೇತನ ಪಾವತಿಸಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಹತ್ತು ವರ್ಷಗಳ ಹಿಂದೆ, ಸ್ಥಳೀಯ ನಿವಾಸಿಗಳನ್ನು ಗುತ್ತಿಗೆ ಆಧಾರದ ಮೇರೆಗೆ ಈ ರಾಯಭಾರ ಕಚೇರಿಯಲ್ಲಿ ಸೇವೆಗೆ ನೇಮಿಸಿಕೊಳ್ಳ ಲಾಗಿತ್ತು. ಇವರಿಗೆ ಪ್ರಸ್ತುತ ತಲಾ 1.80 ಲಕ್ಷ ರೂ. ವೇತನವಿದೆ. ಆದರೆ ಅವರಲ್ಲಿ ಕನಿಷ್ಠ ಐವರಿಗೆ ಈ ವರ್ಷದ ಆಗಸ್ಟ್‌ನಿಂದ ವೇತನ ಪಾವತಿಯಾಗಿಲ್ಲ ಎಂದು ಹೇಳಲಾಗಿದೆ. ಇವರಲ್ಲೊಬ್ಬ ಇದೇ ಸೆಪ್ಟಂಬರ್‌ನಲ್ಲಿ ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರನಡೆದಿದ್ದಾನೆ ಎಂದು ಹೇಳಲಾಗಿದೆ.
ಥಳಿತ ಹತ್ಯೆಗೆ ಖಾನ್ ಬೇಸರ! ಧರ್ಮನಿಂದನೆ ಮಾಡಿದ ಎಂಬ ಕಾರಣಕ್ಕಾಗಿ ಶ್ರೀಲಂಕಾ ಮೂಲದ ವ್ಯಕ್ತಿಯೊಬ್ಬನ್ನು ಪಾಕಿಸ್ಥಾನದಲ್ಲಿ ಥಳಿಸಿ ಹತ್ಯೆಗೈದಿರುವ ಘಟನೆಯ ಬಗ್ಗೆ ಪಾಕಿಸ್ಥಾನದ ಪ್ರಧಾನಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಈ ಘಟನೆಯಿಂದಾಗಿ ವಿಶ್ವದ ಮುಂದೆ ಪಾಕಿಸ್ಥಾನ ತಲೆ ತಗ್ಗಿಸುವಂತಾಗಿದೆ’ ಎಂದು ಖಾನ್ ಹೇಳಿದ್ದಾರೆ.
120 ಮಂದಿ ಬಂಧನ: ಲಂಕಾ ವ್ಯಕ್ತಿಯನ್ನು ಹತ್ಯೆಗೈದ ವರೆಂದು ಹೇಳಲಾಗಿರುವ 120 ಮಂದಿಯನ್ನು ಸಿಯಾ ಲ್‌ಕೋಟ್ ಪ್ರಾಂತ್ಯದ ಪೊಲೀಸರು ಬಂಧಿಸಿದ್ದಾರೆ. ಇದನ್ನು ಪ್ರಧಾನಿ ಇಮ್ರಾನ್ ಖಾನ್‌ರವರ ನೇತೃತ್ವದ ಧಾರ್ಮಿಕ ಸೌಹಾರ್ದ ಸಮಿತಿಯ ಸಲಹೆಗಾರರೂ ಆಗಿರುವ ತಾಹಿರ್ ಅಶ್ರಫಿ ಕೂಡ ಖಾತ್ರಿಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ರುವ ಬಗ್ಗೆ ಪ್ರತಿಕ್ರಿಯಿಸಿರುವ ಝುಲ್ಫಿಕರ್ ಎಂಬ ಪೊಲೀಸ್ ಅಧಿಕಾರಿ, ಲಂಕಾದ ವ್ಯಕ್ತಿಯು ಕೆಲಸ ಮಾಡುತ್ತಿದ್ದ ಸಿಯಾ ಲ್‌ಕೋಟ್ ಪ್ರಾಂತ್ಯದ ಕಾರ್ಖಾನೆಯಲ್ಲಿ, ಆತ ಧಾರ್ಮಿಕ ಪೋಸ್ಟರ್ ಒಂದನ್ನು ಹರಿದು ಕಸದ ಬುಟ್ಟಿಗೆ ಹಾಕಿದ ಎಂಬ ವದಂತಿ ಹರಡಿತು. ಇದರಿಂದ ರೊಚ್ಚಿಗೆದ್ದ ಜನರು ಅವರನ್ನು ಥಳಿಸಿ, ಬೆಂಕಿ ಹಚ್ಚಿ ಕೊಂದಿದ್ದರು. ಪ್ರಾಥಮಿಕ ತನಿಖೆಯ ಆಧಾರದಲ್ಲಿ 120 ಜನರನ್ನು ಬಂಧಿಸಲಾಗಿದೆ ಎಂದಿದ್ದಾರೆ.