Advertisement
ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ಥಾನ ತೆಹ್ರೀಕ್ ಇ- ಇನ್ಸಾಫ್ (ಪಿಟಿಐ) ಪಕ್ಷವು 117 ಸ್ಥಾನಗಳನ್ನು ಗೆಲ್ಲುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 272 ಸದಸ್ಯ ಬಲದ ಪಾಕಿಸ್ಥಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತಕ್ಕೆ 137 ಸ್ಥಾನ ಬೇಕಾಗಿದೆ. ಖಾನ್ ಪಕ್ಷಕ್ಕೆ ಪೂರ್ಣ ಬಹುಮತ ದೊರೆಯದೇ ಇದ್ದರೂ ಇತರ ಪ್ರಮುಖ ಪಕ್ಷಗಳಿಗಿಂತ ಭಾರೀ ಮುನ್ನಡೆ ಸಾಧಿಸಿದೆ. ಐದು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಇಮ್ರಾನ್ ಖಾನ್ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದಾರೆ. ಈ ಸಾಧನೆಗೈದ ಮೊದಲ ನಾಯಕ ಎಂಬ ಹೆಗ್ಗಳಿಕೆಯನ್ನೂ ಅವರು ಗಳಿಸಿಕೊಂಡಿದ್ದಾರೆ. ಪಂಜಾಬ್ ಪ್ರಾಂತ್ಯದ ರಾಜಧಾನಿ, ಪಾಕಿಸ್ಥಾನದ ರಾಜಕೀಯ ಕೇಂದ್ರ ಲಾಹೋರ್‌ನಲ್ಲಿ ಇಮ್ರಾನ್ ಪಕ್ಷದ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಪಕ್ಷದ ಧ್ವಜ ಹಾಗೂ ಸ್ಲೋಗನ್‌ಗಳೊಂದಿಗೆ ಕುಣಿದು ಕುಪ್ಪಳಿಸುತ್ತಾ ಗೆಲುವನ್ನು ಸಂಭ್ರಮಿಸಿದರು. ನವಾಜ್ ಷರೀಫ್ ಅವರ ಅಧಿಕಾರರೂಢ ಪಕ್ಷವಾದ ಪಾಕಿಸ್ಥಾನ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್ಎನ್) ಕೇವಲ 60 ಸ್ಥಾನಗಳನ್ನಷ್ಟೇಗಳಿಸಿದೆ. ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿ ಪಿ) 39 ಸ್ಥಾನಗಳಲ್ಲಷ್ಟೇ ಜಯ ಸಾಧಿಸಿದೆ.
Related Articles
Advertisement
ಚುನಾವಣಾ ಅಕ್ರಮ: ಆರೋಪಇಮ್ರಾನ್ ಪಕ್ಷ ಮುನ್ನಡೆ ಸಾಧಿಸುತ್ತಿದ್ದಂತೆ ಉಳಿದ ಎರಡು ಪ್ರಮುಖ ಪಕ್ಷಗಳಾದ ಪಿಎಂಎಲ್-ಎನ್ ಹಾಗೂ ಪಿಪಿಪಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಮತ ಎಣಿಕೆ ಕಾರ್ಯ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ದೂರಿವೆ. ವಿಪಕ್ಷಗಳಿಗೆ ತಿರುಗೇಟು ನೀಡಿರುವ ಇಮ್ರಾನ್ ಖಾನ್, ಮತಗಳ ಮರು ಎಣಿಕೆಗೆ ತಾವು ಸಿದ್ಧ ಎಂದು ಸವಾಲು ಹಾಕಿದ್ದಾರೆ. ಈ ಮಧ್ಯೆ ಪಾಕ್ ಚುನಾವಣ ಆಯುಕ್ತರು ಮುಂಜಾವ 4 ಗಂಟೆಗೆ ವಿಶೇಷ ಪತ್ರಿಕಾಗೋಷ್ಠಿ ಕರೆದು ಅಕ್ರಮ ಆರೋಪವನ್ನು ತಿರಸ್ಕರಿಸಿದ್ದಾರೆ. ಭಾರ ತ ದತ್ತ ಸ್ನೇಹಹಸ್ತ: ಭಾರತದೊಂದಿಗೆ ನಾನು ಉತ್ತಮ ಬಾಂಧವ್ಯ ಬಯಸುತ್ತೇನೆ. ಈ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಇಟ್ಟರೆ, ಪಾಕಿಸ್ಥಾನ ಎರಡು ಹೆಜ್ಜೆ ಇಡಲಿದೆ ಎಂದು ಪಾಕಿಸ್ಥಾನದ ಭಾವಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಭಾರತದೊಂದಿಗಿನ ಅತೀ ದೊಡ್ಡ ವಿವಾದವೇ ಕಾಶ್ಮೀರ ಕುರಿತದ್ದಾಗಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅದು ನಿಲ್ಲಬೇಕಿದೆ ಎಂದ ಅವರು, ಎರಡೂ ದೇಶಗಳು ಪರಸ್ಪರ ದೂರುವುದನ್ನು ನಿಲ್ಲಿಸಬೇಕು ಎಂದೂ ಅಭಿಪ್ರಾಯಪಟ್ಟರು. ಉಗ್ರರಿಗೆ ತಿರಸ್ಕಾರ: ಪಾಕ್ ಜನರು ತೀವ್ರಗಾಮಿ ಹಾಗೂ ಉಗ್ರಗಾಮಿ ಸಂಘಟನೆ ಗಳನ್ನು ತಿರಸ್ಕರಿಸಿದ್ದಾರೆ.
1 ಜಾಗತಿಕ ಉಗ್ರ ಸಂಘಟನೆಗಳ ಜತೆಗಿನ ಇಮ್ರಾನ್ ಗೆಳೆತನ ಭಾರತಕ್ಕೆ ಮಾರಕ. 2 ಪಕ್ಕಾ ಇಸ್ಲಾಂ ಧರ್ಮಿಷ್ಟ ಎಂಬ ಇಮೇಜ್ ಬೆಳೆಸಿಕೊಂಡಿರುವುದರಿಂದ ಭಾರತದ ಜತೆಗೆ ಸಂಬಂಧ ಸುಧಾರಣೆ ಕಷ್ಟ ಸಾಧ್ಯವಾಗಬಹುದು. 3 ಪಾಕಿಸ್ಥಾನ ಸೇನೆ ಜತೆಗಿನ ಖಾನ್ ನಂಟು ಭಾರತವನ್ನು ಸದಾ ಎಚ್ಚರಿಕೆಯಲ್ಲಿ ಇಡು ವಂತೆ ಮಾಡುತ್ತದೆ. 4 ಕಾಶ್ಮೀರ ಬಿಕ್ಕಟ್ಟು ಬಗೆಹರಿಯಲು ಸೇನಾ ಮಾರ್ಗವೇ ಸೂಕ್ತ ಎಂಬಂಥ ಇಮ್ರಾನ್ ನಿಲುವು ಭಾರತ ಎಂದಿಗೂ ಒಪ್ಪಿಕೊಳ್ಳುವಂಥದ್ದಲ್ಲ. 5 ಇಷ್ಟರ ನಡುವೆಯೂ ಮೂಲತಃ ಕ್ರಿಕೆಟ್ ತಾರೆ ಇಮ್ರಾನ್ ಭಾರತದಲ್ಲಿ ಹೊಂದಿರುವ ಗೆಳೆತನಗಳು ಬಾಂಧವ್ಯ ವೃದ್ಧಿಗೆ ಪೂರಕವಾಗಬಹುದು. ಅಧಿಕಾರಾರೂಢರಿಗೆ ಹಾಗೂ ಸಾಮಾನ್ಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ ಇರುವುದೇ ಇಂದು ಪಾಕಿಸ್ಥಾನ ಹಿಂದುಳಿಯಲು ಮುಖ್ಯ ಕಾರಣ. ವಿಐಪಿ ಸಂಸ್ಕೃತಿ ಕೊನೆಗಾಣಿಸುತ್ತೇನೆ. ಈಗಿನ ಪ್ರಧಾನಿ ನಿವಾಸವನ್ನು ಶಿಕ್ಷಣ ಸಂಸ್ಥೆಯಾಗಿಸುವೆ. ನನ್ನನ್ನೂ ಸೇರಿದಂತೆ ಸರಕಾರವನ್ನು ಉತ್ತರದಾಯಿತ್ವಕ್ಕೆ ಒಳಪಡಿಸುತ್ತೇನೆ. ಆಡಳಿತದಲ್ಲಿ ಸುಧಾರಣೆ ತಂದು ಆರ್ಥಿಕ ಸವಾಲನ್ನು ನೀಗಿಸುತ್ತೇನೆ.
-ಇಮ್ರಾನ್ ಖಾನ್, ಭಾವಿ ಪಾಕ್ ಪ್ರಧಾನಿ