Advertisement

ಪಾಕಿಸ್ತಾನಕೆ ಯುದ್ಕ ಮಾಡೋ ಸಾಮರ್ಥ್ಯವಿಲ್ಲ

11:42 AM Mar 03, 2019 | Team Udayavani |

ಹರಪನಹಳ್ಳಿ: ಭಾರತದ ಎದುರು ಯುದ್ಧ ಮಾಡುವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ಒತ್ತಡ ಹಾಕಿ, ಪಾಕಿಸ್ತಾನದ ಜುಟ್ಟು ಹಿಡಿದ ಪರಿಣಾಮ ಯುದ್ಧಕ್ಕೆ ಹೆದರಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಬೇಷರತ್‌ ಬಿಡುಗಡೆ ಮಾಡಿದೆ ಎಂದು ಟೀಮ್‌ ಮೋದಿ ಸಂಸ್ಥಾಪಕ ಚಕ್ರವರ್ತಿಸೂಲಿಬೆಲೆ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಟೀಂ ಮೋದಿ ತಂಡದವತಿಯಿಂದ ಹಮ್ಮಿಕೊಂಡಿಕೊಂಡಿದ್ದ ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಕಾರ್ಯಕ್ರಮ ಮತ್ತು ಪ್ರಧಾನಮಂತ್ರಿ ಅವರ ಸಾಧನೆ ಹಾಗೂ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಗಳ ಕುರಿತ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನ ನಿಜವಾಗಿಯೂ ಶಾಂತಿ ಬಯಸುವುದಾದರೆ ಮೊದಲು ಭಾರತದ ಸಾವಿರಾರು ಜನರ ಹತ್ಯೆಗೆ ಕಾರಣರಾದ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ, ಉಗ್ರಗಾಮಿ ಸಂಘಟನೆ ಮುಖಂಡರನ್ನು ಹಸ್ತಾಂತರಿಸಬಹುದಿತ್ತು. ಪಾಕಿಸ್ತಾನಕ್ಕೆ ಶೇ.70ರಷ್ಟು ಇಂಧನ ಜಲಮಾರ್ಗದ ಮೂಲಕ ಸರಬರಾಜು ಆಗುತ್ತಿದೆ. ಪಾಕಿಸ್ತಾನಕ್ಕೆ ಬರುವ ಇಂಧನದ ಹಡಗನ್ನು ಭಾರತದ ನೌಕಾಪಡೆ ತಡೆದರೆ ನಾಲ್ಕು ದಿನಗಳಲ್ಲಿ ಅಲ್ಲಿ ಇಂಧನ ಕ್ಷಾಮ ಉಂಟಾಗಲಿದೆ. ನಮ್ಮ ನೌಕಾಪಡೆಯನ್ನು ತಡೆಯುವ ಶಕ್ತಿ ಸದ್ಯಕ್ಕೆ ಇರುವುದು ಅಮೆರಿಕ ಮತ್ತು ರಷ್ಯಾಕ್ಕೆ ಮಾತ್ರ. ಈ ಬೆಳವಣಿಗೆಯಲ್ಲಿ ಈ ಎರಡೂ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿವೆ. ನೌಕಾಪಡೆ ಕಾರ್ಯಾಚರಣೆಗೆ ಇಳಿದರೆ ನಾಲ್ಕು ದಿನಗಳಲ್ಲಿ ಪಾಕಿಸ್ತಾನ ಮಂಡಿಯೂರಿ ಭಾರತದ ಮುಂದೆ ಕುಳಿತುಕೊಳ್ಳಬೇಕಾಗುತ್ತದೆ ಎಂದರು.

ರಫೇಲ್‌ ಯುದ್ಧ ವಿಮಾನ ಬಂದರೆ ಪಾಕಿಸ್ತಾನವಷ್ಟೇ ಅಲ್ಲ; ಚೀನಾವನ್ನೂ ಗುರಾಯಿಸಿ ನೋಡುವ ಶಕ್ತಿ ನಮಗೆ ಬರಲಿದೆ. ಮೂರು ವರ್ಷಗಳಲ್ಲಿ 36 ರಫೇಲ್‌ ಯುದ್ಧ ವಿಮಾನಗಳು ಬರಲಿದ್ದು, ಆಗ ನಮ್ಮ ವಾಯುಪಡೆಯ ತಾಕತ್ತು ಹೇಗಿರುತ್ತದೆ ಎಂದು ನೋಡಬೇಕು. ಅಣುಬಾಂಬ್‌ ಇರುವ ದೇಶದ ಮೇಲೆಯೂ ನಿರ್ದಿಷ್ಟ ದಾಳಿ ನಡೆಸುವ ಮೂಲಕ ಮೋದಿ ಪಾಕಿಸ್ತಾನದ ಮಿಲಿಟರಿ ಹಾಗೂ ರಾಜಕೀಯ ನಾಯಕತ್ವದ ಶಕ್ತಿ ದುರ್ಬಲವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ರಾಹುಲ್‌ ಗಾಂಧಿ , ಪ್ರಕಾಶ್‌ರಾಜ್‌ ಅವರಂತವರ ಬಗ್ಗೆ ಜನ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮೋದಿಯನ್ನು ಮತ್ತೂಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಧಾರ್ಮಿಕತೆಯ ದೇಶವಾದ ಭಾರತವನ್ನು ಕೇವಲ ಬಲಾಡ್ಯ ಆರ್ಥಿಕ ಶಕ್ತಿಯನ್ನಾಗಿ ಬಿಂಬಿಸದೇ ಒಂದು ಆಧ್ಯಾತ್ಮಿಕ ಕೇಂದ್ರವನ್ನಾಗಿ ಪ್ರಧಾನಿ ಮೋದಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವದ ಅನೇಕ ರಾಷ್ಟ್ರಗಳ ಮನ್ನಣೆಗೆ ಮುನ್ನುಡಿ ಬರೆದಿದ್ದಾರೆ ಎಂದರು. ನರೇಂದ್ರ ಮೋದಿಯವರು ವಿದ್ಯಾರ್ಥಿಗಳ ಜೊತೆ ಸಂವಾದ, ಬಡಜನರ ಸಹಾಯಕ್ಕೆ ಮೊದಲ ಅದ್ಯತೆ ನೀಡಿ, ಮನ್‌ ಕೀ ಬಾತ್‌ನಂತಹ ಹಲವಾರು ಯೋಜನೆಗಳು ಜನರ ಮನ-ಮನೆಗಳಲ್ಲಿ ಮನೆ ಮಾಡಿವೆ. ಹಲವಾರು ಯೋಜನೆಗಳನ್ನು ಸಮಾಜದ ಮಡಿಲಿಗೆ ಹಾಕಿ ಹಿಂದೆಂದೂ ಕಾಣದ ಅಭಿವೃದ್ಧಿಗೆ ಅಭಯದ ಮಾರ್ಗ ತೋರಿದ ಮೋದಿಯವರನ್ನು ಯಾರು ಮರೆಯುವಂತಿಲ್ಲ ಎಂದರು. ಟೀ ಮೋದಿ ತಾಲೂಕು ಸಂಚಾಲಕ ಲಿಂಗನಗೌಡ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next