ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ್ದ ಮೊದಲ ದಿನವೇ “ಕಾಶ್ಮೀರದ ಬೀದಿಗಳಲ್ಲಿ ರಕ್ತ ಹರಿಯುತ್ತಿದೆ’ ಎನ್ನುವ ಮೂಲಕ ಭಾರತವನ್ನು ಕೆಣಕಿದ್ದ ಶೆಹಬಾಜ್ ಷರೀಫ್ ಮಂಗಳವಾರ ಮೆತ್ತಗಾಗಿದ್ದಾರೆ.
ತಮಗೆ ಅಭಿನಂದನೆ ಸಲ್ಲಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಟ್ವೀಟ್‌ಗೆ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಶೆಹಬಾಜ್, “ನಮ್ಮ ದೇಶವು ಭಾರತದೊಂದಿಗೆ ಶಾಂತಿಯುತ ಮತ್ತು ಸಹಕಾರಯುತ ಸಂಬಂಧವನ್ನು ಬಯಸುತ್ತದೆ’ ಎಂದಿದ್ದಾರೆ.
“ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎರಡೂ ದೇಶಗಳ ನಡುವೆ ಇರುವ ಎಲ್ಲ ಸಮಸ್ಯೆಗಳಿಗೂ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕಿದೆ. ಪಾಕಿಸ್ತಾನವೂ ಅದನ್ನೇ ಬಯಸುತ್ತದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ಮಾಡುತ್ತಿರುವ ತ್ಯಾಗವು ಎಲ್ಲರಿಗೂ ಗೊತ್ತಿದೆ. ನಾವೀಗ ಶಾಂತಿ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯತ್ತ ಗಮನ ನೆಡಬೇಕಿದೆ’ ಎಂದೂ ಶೆಹಬಾಜ್ ಹೇಳಿದ್ದಾರೆ.
ಸೋಮವಾರವಷ್ಟೇ ಶೆಹಬಾಜ್‌ರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, “ಉಗ್ರವಾದ- ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಭಾರತ ಬಯಸುತ್ತದೆ’ ಎಂದಿದ್ದರು. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ, ಅಭಿನಂದನೆಯ ಜೊತೆಗೆ “ಭಯೋತ್ಪಾದನೆ ಮಟ್ಟ ಹಾಕಿ’ ಎಂದಿದ್ದಾರೆ.
ವಾರಕ್ಕೊಂದೇ ರಜೆ, 10 ಗಂಟೆ ಕೆಲಸ!
ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇಮ್ರಾನ್ ಅವಧಿಯಲ್ಲಿದ್ದ ಕೆಲವು ನಿಯಮಗಳನ್ನು ತೆಗೆದುಹಾಕಿದ್ದಾರೆ. ಇಮ್ರಾನ್ ಖಾನ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಕಚೇರಿಗಳಿಗೆ ವಾರಕ್ಕೆ 2 ದಿನ ರಜೆಯಿತ್ತು. ಆ ನಿಯಮ ರದ್ದು ಮಾಡಿರುವ ಶೆಹಬಾಜ್, ಇನ್ನು ಮುಂದೆ ವಾರಕ್ಕೆ ಒಂದೇ ದಿನ ಅಂದರೆ ಭಾನುವಾರ ಮಾತ್ರ ರಜೆಯಿರುತ್ತದೆ. ಅಲ್ಲದೇ, ಸರ್ಕಾರಿ ಸಿಬ್ಬಂದಿ ದಿನಕ್ಕೆ 10 ಗಂಟೆ ಕೆಲಸ ಮಾಡಬೇಕು. ದುಸ್ಥಿತಿಯಲ್ಲಿರುವ ಆರ್ಥಿಕತೆಯನ್ನು ಹಳಿಗೆ ತರುವ ನಿಟ್ಟಿನಲ್ಲಿ ಈ ಬದಲಾವಣೆ ತರಲಾಗಿದೆ ಎಂದಿದ್ದಾರೆ.